

ನವದೆಹಲಿ: ಡೆಂಗೆ ಜ್ವರದಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ವಿಶ್ವಕಪ್ ಪಂದ್ಯ ತಪ್ಪಿಸಿಕೊಂಡಿದ್ದ, ಭಾರತ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಎರಡನೇ ಪಂದ್ಯದಲ್ಲೂ ಕಣಕ್ಕಿಳಿಯುವುದು ಡೌಟ್ ಎಂದು ಹೇಳಲಾಗಿದೆ.
ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಬಿಸಿಸಿಐ ಭಾರತ ತಂಡದ ಬ್ಯಾಟ್ಸ್ಮನ್ ಶುಭಮನ್ ಮುಂದಿನ ಪಂದ್ಯಕ್ಕೆ ದೆಹಲಿಗೆ ಪ್ರಯಾಣಿಸುತ್ತಿಲ್ಲ. ಚೆನ್ನೈನಲ್ಲೇ ಅವರು ಉಳಿಯಲಿದ್ದು, ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ತಿಳಿಸಿದೆ.
ಭಾರತದ ಬ್ಯಾಟ್ಸ್ಮನ್ ಶುಭಮನ್ ಗಿಲ್ ಅಕ್ಟೋಬರ್ 9ರಂದು ತಂಡದ ಜೊತೆ ದೆಹಲಿಗೆ ಪ್ರಯಾಣಿಸುತ್ತಿಲ್ಲ. ಅಕ್ಟೋಬರ್ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುವ ಪಂದ್ಯಕ್ಕೆ ಗಿಲ್ ಲಭ್ಯರಿರುವುದಿಲ್ಲ. ಅವರು ಚೆನ್ನೈನಲ್ಲೇ ಉಳಿಯಲಿದ್ದು, ವಯದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಬದಲಿಗೆ ಆರಂಭಿಕರಾಗಿ ಇಶಾನ್ ಕಿಶನ್ ಕಣಕ್ಕಿಳಿದಿದ್ದರು. ಆದರೆ, ಒಂದು ರನ್ ಗಳಿಸದೆ ನಿರಾಸೆ ಮೂಡಿಸಿದ್ದರು. ಕಿಶನ್ ಜೊತೆಗೆ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಸಹ ಶೂನ್ಯ ಸುತ್ತಿದ್ದರು. ವಿರಾಟ್ಕೊಹ್ಲಿ-ಕೆ.ಎಲ್. ರಾಹುಲ್ 165ರನ್ಗಳ ಜೊತೆಯಾಟದ ಫಲವಾಗಿ ಭಾರತ ಆರು ವಿಕೆಟ್ಗಳ ಭರ್ಜರಿ ಜಯ ಗಳಿಸಿತ್ತು.