More

    ರಾಜಸ್ಥಾನ ವಿಧಾನಸಭೆ ಚುನಾವಣೆ| ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ಮಾಜಿ ಸಿಎಂ ವಸುಂಧರಾಗೆ ಶಾಕ್

    ನವದೆಹಲಿ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಆಪ್ತರ ಹೆಸರನ್ನು ಘೋಷಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮೊದಲ ಪಟ್ಟಿಯಲ್ಲಿ 41 ಮಂದಿಯ ಹೆಸರನ್ನೂ ಘೋಷಿಸಲಾಗಿದ್ದು, ಈ ಪೈಕಿ ಏಳು ಸಂಸದರಿಗೆ ವಿಧಾನಸಭೆ ಚುನಾವಣೆಯ ಟಿಕೆಟ್​ ನೀಡಲಾಗಿದೆ.

    ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಹಾಗೂ ಅವರ ಆಪ್ತರಾದ ಶಾಸಕ ನರಪತ್ ಸಿಂಗ್ ರಾಜ್‌ವೀ ಮತ್ತು ರಾಜ್‌ಪಾಲ್ ಸಿಂಗ್ ಶೇಖಾವತ್ ಹೆಸರು ಘೋಷಣೆಯಾಗುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್​ ಇದ್ಯಾವುದನ್ನು ಮಾಡದೆ ವಸುಂಧರಾ ಹಾಗೂ ಅವರ ಆಪ್ತರಿಗೆ ಶಾಕ್ ನೀಡಿದೆ.

    ಜೋತ್ವಾರದಿಂದ ರಾಜ್ಯವರ್ಧನ್ ರಾಥೋಡ್, ವಿದ್ಯಾಧರ್ ನಗರದಿಂದ ದಿಯಾ ಕುಮಾರ್, ತಿಜಾರಾದಿಂದ ಬಾಬಾ ಬಾಲಕನಾಥ್, ಮಾಂಡವಾದಿಂದ ನರೇಂದ್ರ ಕುಮಾರ್, ಕಿಶನ್‌ಗಢದಿಂದ ಭಾಗೀರಥ್ ಚೌಧರಿ, ಸವಾಯಿ ಮಾಧೋಪುರದಿಂದ ಕಿರೋಡಿ ಲಾಲ್ ಮೀನಾ ಮತ್ತು ಸಂಚೋರ್‌ನಿಂದ ದೇವ್‌ಜೀ ಪಟೇಲ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್​ ಪಡೆದಿರುವ ಏಳು ಸಂಸದರು.

    ಇದನ್ನೂ ಓದಿ: ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥ ರಾವ್​ ಇನ್ನಿಲ್ಲ

    ಕಳೆದ ಆಗಸ್ಟ್​ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಣಾಳಿಕೆ ಹಾಗೂ ಚುನಾವಣಾ ನಿರ್ವಹಣಾ ಸಮಿತಿ ಎರಡರಿಂದಲೂ ವಸುಂಧರಾ ರಾಜೇ ಹಾಗೂ ಅವರ ಆಪ್ತರನ್ನು ಕೈ ಬಿಡಲಾಗಿತ್ತು. ರಾಜಸ್ಥಾನ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ವಸುಂಧರಾ ರಾಜೇ ಅವರನ್ನು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

    ಇತ್ತ ರಾಜಸ್ಥಾನ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಪಟ್ಟಿಯಲ್ಲಿ ಏಳು ಜನ ಸಂಸದರಿಗೆ ವಿಧಾನಸಭೆ ಚುನಾವಣೆಯ ಟಿಕೆಟ್​ ನೀಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

    ರಾಷ್ಟ್ರೀಯ ಚುನಾವಣಾ ಆಯೋಗವು ಸೋಮವಾರ ಪಂಚ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್​ಗಢ ಹಾಗೂ ಮಿಜೋರಾಂಗೆ ಚುನಾವಣೆಯ ದಿನಾಂಕಗಳನ್ನು ಘೋಷಿಸಿದೆ. ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜಸ್ಥಾನದಲ್ಲಿ ನವೆಂಬರ್ 23 ರಂದು ಮತದಾನ ನಡೆಯಲಿದ್ದು, ಎಲ್ಲಾ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್​ 3ಕ್ಕೆ ಪ್ರಕಟವಾಗಲಿದೆ.

    ECI five States List

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts