

ಚೆನ್ನೈ: ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂಬತ್ತು ಮಂದಿ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್ ಜಿಲ್ಲೆಯಲ್ಲಿ ನಡೆದಿದೆ. ಅರಿಯಲೂರು ಜಿಲ್ಲೆಯ ವೆಟ್ರಿಯೂರು ಗ್ರಾಮದ ಬಳಿ ಇರುವ ವೀರಗಾಲೂರು ಬಳಿ ದುರ್ಘಟನೆ ಸಂಭವಿಸಿದೆ.
ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನೆಂಬುದನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಘಟನೆ ಬೆಳಗ್ಗೆ 10 ಘಂಟೆ ಸುಮಾರಿಗೆ ಸಂಭವಿಸಿದ್ದು, ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಇಲಾಖೆಯವರು ಯಶಸ್ವಿಯಾಗಿ ನಂದಿಸಿದ್ದಾರೆ ಎಂದು ಹಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತಪಟ್ಟವರಿಗೆ ತಲಾ 5 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ 1 ಲಕ್ಷ ರೂಪಾಯಿ, ಸಣ್ಣಪುಟ್ಟ ಗಾಯಗಳಾಗಿರುವವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಅಗ್ನಿ ಅವಘಡದಲ್ಲಿ ಗಾಯಗೊಂಡಿರುವವರನ್ನು ತಂಜಾವೂರಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ವಿಶೇಷ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಘಟನಾ ಸ್ಥಳಕ್ಕೆ ಸಚಿವರಾದ ಶಿವಶಂಕರ್ ಹಾಗೂ ಗಣೇಶನ್ರನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯ ಹಾಗೂ ಪರಿಹಾರ ಚಟುವಟಿಕೆಗಳನ್ನು ತ್ವರಿತಗೊಳಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.