

ಪರ್ತ್ : ಬ್ಯಾಟಿಂಗ್ ವೈಫಲ್ಯದಿಂದಾಗಿ ನಾವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ಶುಭಮಾನ್ ಗಿಲ್ ( Shubman Gill ) ಹೇಳಿದರು. ಭಾನುವಾರ (ಅ.19) ಪರ್ತ್‌ನಲ್ಲಿ ಆಸೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಸೋತಿತು.
ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿತು. ಆದರೆ, ಮಳೆರಾಯ ಬಿಟ್ಟು ಬಿಟ್ಟು ಆಗಮಿಸಿದ್ದರಿಂದ ಹಲವು ಬಾರಿ ಇನ್ನಿಂಗ್ಸ್‌ಗೆ ಅಡ್ಡಿಯಾಯಿತು. ಹೀಗಾಗಿ, ಪಂದ್ಯವನ್ನು 26 ಓವರ್‌ಗಳಿಗೆ ಇಳಿಸಲಾಯಿತು. ಟೀಮ್ ಇಂಡಿಯಾ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿತು. ಕೆಎಲ್ ರಾಹುಲ್ (38) ಮತ್ತು ಅಕ್ಷರ್ ಪಟೇಲ್ (31) ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ವಿರಾಟ್ ಕೊಹ್ಲಿ (0), ರೋಹಿತ್ ಶರ್ಮಾ (8), ಶ್ರೇಯಸ್ ಅಯ್ಯರ್ (11) ಮತ್ತು ಶುಭಮಾನ್ ಗಿಲ್ (10) ವಿಫಲರಾದರು. ಆಸೀಸ್ ಬೌಲರ್‌ಗಳಲ್ಲಿ ಜೋಶ್ ಹ್ಯಾಜಲ್‌ವುಡ್, ವೋನೆ ಮತ್ತು ಕುನೆಮನ್ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಮಿಚೆಲ್ ಸ್ಟಾರ್ಕ್ ಮತ್ತು ಎಲ್ಲಿಸ್ ತಲಾ ಒಂದು ವಿಕೆಟ್ ಪಡೆದರು.
ನಂತರ ಡಕ್ವರ್ತ್ ಲೂಯಿಸ್ ವಿಧಾನದ ಮೂಲಕ ಆಸೀಸ್ ತಂಡಕ್ಕೆ 131 ರನ್ ಗುರಿ ನಿಗದಿಪಡಿಸಲಾಯಿತು. ಆಸೀಸ್ ತಂಡವು 21.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಆಸೀಸ್ ಪರ ಮಿಚೆಲ್ ಮಾರ್ಷ್ (ಔಟಾಗದೆ 46) ಮತ್ತು ಜೋಶ್ ಫಿಲಿಪ್ (37) ಅತ್ಯಧಿಕ ರನ್ ಗಳಿಸಿದರು. ಟೀಮ್ ಇಂಡಿಯಾ ಪರ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.
ಪಂದ್ಯದ ನಂತರ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಶುಭಮಾನ್ ಗಿಲ್, ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ನಾವು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು. ಮಳೆಯಿಂದ ಅಡಚಣೆಯಾದ ಇಂತಹ ಪಂದ್ಯಗಳಲ್ಲಿ ಆಡುವುದು ಒಂದು ಸವಾಲು. ಈ ಸೋಲಿನ ನಂತರವೂ ನಾವು ಬಹಳಷ್ಟು ಕಲಿತಿದ್ದೇವೆ ಎಂದು ಗಿಲ್ ಹೇಳಿದರು.
131 ರನ್‌ಗಳ ಗುರಿಯನ್ನು ಕಾಯ್ದುಕೊಳ್ಳಲು ಬೌಲರ್‌ಗಳು ಶ್ರಮಿಸಿದರು. ಅವರು ಪಂದ್ಯವನ್ನು ಸಾಧ್ಯವಾದಷ್ಟು ಕೊನೆಯವರೆಗೂ ಕೊಂಡೊಯ್ದರು ಮತ್ತು ಇದಕ್ಕಾಗಿ ಬೌಲರ್‌ಗಳನ್ನು ಅಭಿನಂದಿಸುತ್ತೇನೆ ಎಂದರು. ನಾವು ಹೋದ ಕಡೆಯೆಲ್ಲ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಗಿಲ್ ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ, ಇದು ನನ್ನ ಅದೃಷ್ಟ ಎಂದರು. (ಏಜೆನ್ಸೀಸ್)