

Shubman Gill : ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್ ಹೊಸ ಯುಗವನ್ನು ಪ್ರವೇಶಿಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದ್ದು, ಭಾರತಕ್ಕೀಗ ಹೊಸ ಸವಾಲು ಎದುರಾಗಿದೆ. ಈ ಯೋಚನೆಯ ನಡುವೆಯೇ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಯುವ ಆಟಗಾರ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ಬಿಸಿಸಿಐ ನೇಮಿಸಿದೆ. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ಹೆಸರಿಸಲಾಗಿದೆ. ಇಂಗ್ಲೆಂಡ್ ಪ್ರವಾಸಕ್ಕಾಗಿ ಆಯ್ಕೆ ಸಮಿತಿಯು 18 ಸದಸ್ಯರ ತಂಡವನ್ನೂ ಹೆಸರಿಸಿದೆ.
ಇದೇ ಸಂದರ್ಭದಲ್ಲಿ, ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಿದ ಬಗ್ಗೆ ಮತ್ತು ಇಂಗ್ಲೆಂಡ್ ಸರಣಿಗೆ ಘೋಷಿಸಲಾದ ತಂಡದ ಬಗ್ಗೆ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ನಾಯಕತ್ವದಲ್ಲಿ ಅನುಭವದ ಕೊರತೆಯ ಹೊರತಾಗಿಯೂ ಗಿಲ್ ಅವರನ್ನು ನಾಯಕನನ್ನಾಗಿ ಮಾಡಿದ್ದು ಅಜಿತ್ ಅಗರ್ಕರ್ ಅವರ ದಿಟ್ಟ ನಡೆ ಎಂದು ಅವರು ಭಾವಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹೊಸ ಚಕ್ರ (WTC 2025-2027) ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಆಯ್ಕೆದಾರರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಿರುವಂತೆ ತೋರುತ್ತದೆ. ಈ ತಂಡದಲ್ಲಿರುವ ಆಟಗಾರರು ಇನ್ನೂ ಎರಡು ವರ್ಷಗಳ ಕಾಲ ಆಡಬೇಕೆಂದು ಆಯ್ಕೆ ಸಮಿತಿ ಬಯಸಿರುವಂತೆ ಕಾಣುತ್ತದೆ. ಗಿಲ್ ಅವರನ್ನು ನಾಯಕನನ್ನಾಗಿ ಮಾಡಿರುವುದು ಒಂದು ದಿಟ್ಟ ನಡೆ. ಏಕೆಂದರೆ ಅವರಿಗೆ ನಾಯಕನಾಗಿ ಹೆಚ್ಚಿನ ಅನುಭವವಿಲ್ಲ. ಇದಲ್ಲದೆ, ತಂಡದಲ್ಲಿರುವ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಕರಣ್ ನಾಯರ್ ಅವರಂತಹ ಆಟಗಾರರು ಅವರಿಗಿಂತ ಹೆಚ್ಚು ಅನುಭವಿಗಳಿದ್ದಾರೆ. ಒಟ್ಟಾರೆಯಾಗಿ, ಇದು ಉತ್ತಮ ತಂಡ ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಭಾರತೀಯ ನಾಯಕನಾಗಿ ಯಾರನ್ನೇ ಆಯ್ಕೆ ಮಾಡಿದರೂ, ಅವರ ಮೇಲೆ ಒತ್ತಡ ಇರುವುದು ಸಹಜ. ಏಕೆಂದರೆ ಆಟಗಾರನಾಗುವುದಕ್ಕೂ ನಾಯಕನಾಗುವುದಕ್ಕೂ ತುಂಬಾ ವ್ಯತ್ಯಾಸವಿದೆ. ನೀವು ತಂಡದ ಸದಸ್ಯರಾಗಿರುವಾಗ, ನಿಮಗೆ ಹತ್ತಿರವಿರುವ ಆಟಗಾರರೊಂದಿಗೆ ನೀವು ಸಂವಹನ ನಡೆಸುತ್ತೀರಿ. ಆದರೆ, ನೀವು ನಾಯಕರಾಗಿರುವಾಗ, ತಂಡದ ಇತರ ಆಟಗಾರರು ನಿಮ್ಮನ್ನು ಗೌರವಿಸುವ ರೀತಿಯಲ್ಲಿ ನೀವು ವರ್ತಿಸಬೇಕು. ನಾಯಕನ ನಡವಳಿಕೆ, ಅವರ ಪ್ರದರ್ಶನ ಬಹಳ ಮುಖ್ಯ ಎಂದು ಗವಾಸ್ಕರ್ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡುತ್ತಾ, ಗಿಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಬೇಕೆಂದು ಸಲಹೆ ನೀಡಿದರು. ನಂತರ, ಕರುಣ್ ನಾಯರ್ ನಾಲ್ಕನೇ ಕ್ರಮಾಂಕದಲ್ಲಿ ಮತ್ತು ಸಾಯಿ ಸುದರ್ಶನ್ ಐದನೇ ಕ್ರಮಾಂಕದಲ್ಲಿ ಬರಬೇಕೆಂದು ಗವಾಸ್ಕರ್ ಸೂಚಿಸಿದರು. ಆರಂಭಿಕ ಆಟಗಾರನಾಗಿ ಗಿಲ್ಗೆ ಸಾಕಷ್ಟು ಅನುಭವವಿದೆ. ಭಾರತ ತಂಡ ಬೇಗನೆ ವಿಕೆಟ್ ಕಳೆದುಕೊಂಡರೆ, ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಗವಾಸ್ಕರ್ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಅಥವಾ ಮೂರು ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳು ಕಷ್ಟಪಡುವ ಸಾಧ್ಯತೆಯಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು. ಆದ್ದರಿಂದ, ಬೌಲಿಂಗ್ ಘಟಕವು ಜವಾಬ್ದಾರಿಯನ್ನು ತೆಗೆದುಕೊಂಡು ಭಾರತವನ್ನು ಗೆಲುವಿನತ್ತ ಕೊಂಡೊಯ್ಯಬೇಕು ಎಂದು ಗವಾಸ್ಕರ್ ಸಲಹೆ ನೀಡಿದರು.
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ ( ವಿಕೆಟ್ ಕೀಪರ್ ಮತ್ತು ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್ ಮತ್ತು ಕುಲದೀಪ್ ಯಾದವ್ ಸೇರಿ 18 ಜನ ತಂಡದಲ್ಲಿ ಸ್ಥಾವ ಪಡೆದಿದ್ದಾರೆ. (ಏಜೆನ್ಸೀಸ್)