ಸುನೀಲ್​ ನಾರಾಯಣ್​ ರೀತಿಯಲ್ಲೇ ಬೌಲಿಂಗ್​ ಮಾಡಿದ ಶ್ರೇಯಸ್ ಅಯ್ಯರ್: ವಿಡಿಯೋ ವೈರಲ್​

Shreyas Iyer
Published on

ನವದೆಹಲಿ: ಬುಚ್ಚಿ ಬಾಬು ಟ್ರೋಫಿಯಲ್ಲಿ ಕೆಕೆಆರ್​ ತಂಡದ ಸಹ ಆಟಗಾರ ಸುನೀಲ್ ನಾರಾಯಣ್​ ಬೌಲಿಂಗ್​ ಶೈಲಿಯನ್ನು ಶ್ರೇಯಸ್ ಅಯ್ಯರ್ ಅನುಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್​ ಆದಾಗಿನಿಂದ ಅನೇಕ ಬ್ಯಾಟ್ಸ್‌ಮನ್‌ಗಳು ಬೌಲಿಂಗ್ ಮಾಡುತ್ತಿದ್ದಾರೆ. ಈಗಾಗಲೇ ಸೂರ್ಯಕುಮಾರ್​ ಯಾದವ್​ ಹಾಗೂ ರಿಂಕು ಸಿಂಗ್​ ಬೌಲಿಂಗ್​ ಮಾಡಿದ್ದಾರೆ. ಅಲ್ಲದೆ, ದೆಹಲಿ ಪ್ರೀಮಿಯರ್​ ಲೀಗ್​ನಲ್ಲಿ ರಿಷಭ್​ ಪಂತ್​ ಕೂಡ ಬೌಲಿಂಗ್​ ಮಾಡಿ ಗಮನ ಸೆಳೆದಿದ್ದರು. ಇದೀಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಕೂಡ ಬೌಲಿಂಗ್​ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮಂಗಳವಾರ ನಡೆದ ಬುಚ್ಚಿಬಾಬು ಟೂರ್ನಿಯಲ್ಲಿ ಅಯ್ಯರ್ ಬೌಲಿಂಗ್ ಮಾಡಿದರು. ಈ ವೇಳೆ ಅವರು ಆಲ್​ರೌಂಡರ್ ಸುನೀಲ್ ನಾರಾಯಣ್​ ಅವರನ್ನು ಅನುಕರಿಸಿದ್ದಾರೆ. ಅಯ್ಯರ್ ಮತ್ತು ನಾರಾಯಣ್​ ಇಬ್ಬರು ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುತ್ತಿರುವುದು ಗೊತ್ತೇ ಇದೆ.

29ರ ಹರೆಯದ ಅಯ್ಯರ್ ಬುಚ್ಚಿ ಬಾಬು ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿದ್ದಾರೆ. ಮುಂಬೈ ತಂಡವು TNCA XI ಅನ್ನು ಎದುರಿಸುತ್ತಿದೆ. ಆಗಸ್ಟ್ 27 ರಂದು ಪಂದ್ಯದ ಮೊದಲ ದಿನದಂದು ಅಯ್ಯರ್ ಬೌಲಿಂಗ್ ಮಾಡಿದರು. ಸುನೀಲ್​ ನಾರಾಯಣರಂತೆ ಮೊದಲು ಚೆಂಡನ್ನು ಮರೆಮಾಡಿ, ನಂತರ ಚೆಂಡನ್ನು ಎಸೆಯುವ ರೀತಿಯಲ್ಲೇ ಅಯ್ಯರ್​ ಬೌಲಿಂಗ್​ ಮಾಡಿದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಾರಾಯಣ್​ ರೀತಿಯಲ್ಲಿ ಅಯ್ಯರ್ ಬೌಲಿಂಗ್ ಮಾಡುವುದನ್ನು ಕ್ರಿಕೆಟ್ ಪ್ರೇಮಿಗಳು ನೋಡಿ ಆನಂದಿಸಿದ್ದಾರೆ. ಇದೀಗ ಭಾರತ ತಂಡದಲ್ಲಿ ಸುನೀಲ್​ ನಾರಾಯಣ್ ರೀತಿಯ ಬೌಲರ್​ ಕೊರತೆ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಕ್ರೀಡಾಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಸದ್ಯ ಭಾರತ ತಂಡ ವಿಶ್ರಾಂತಿ ಪಡೆಯುತ್ತಿದೆ. ಇದರ ನಡುವೆ ಭಾರತದ ಕೆಲ ಆಟಗಾರರು ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಅಯ್ಯರ್ ಶೀಘ್ರದಲ್ಲೇ ದುಲೀಪ್ ಟ್ರೋಫಿ ಪ್ರವೇಶಿಸಲಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಪ್ರವಾಸದಲ್ಲಿ ಅಯ್ಯರ್​ ವಿಫಲರಾದರು. ಮೂರು ಏಕದಿನ ಪಂದ್ಯಗಳಲ್ಲಿ ಕೇವಲ 38 ರನ್ ಗಳಿಸಿದ್ದರು. ಭಾರತ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net