ಕಾರು ಅಪಘಾತದಲ್ಲಿ ಇಬ್ಬರ ಪ್ರಾಣ ತೆಗೆದು ನಗು ಬೀರಿ ಹೇ ಬಡವ ಎಂದ ಮಹಿಳೆ ವಿರುದ್ಧ ಜನಾಕ್ರೋಶ!

Pak Woman
Published on

ನವದೆಹಲಿ: ಕಾರು ಅಪಘಾತದಲ್ಲಿ ಇಬ್ಬರು ಅಮಾಯಕರ ಪ್ರಾಣ ತೆಗೆದಿದ್ದಲ್ಲದೆ, ಕ್ಯಾಮೆರಾ ಮುಂದೆ ನಗು ಬೀರಿದ ಪಾಕಿಸ್ತಾನಿ ಮಹಿಳೆಯ ವಿಡಿಯೋ ವೈರಲ್​ ಆಗಿದ್ದು, ಆಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಆಗಸ್ಟ್​ 19ರಂದು ಪಾಕಿಸ್ತಾನದ ಪ್ರಖ್ಯಾತ ಉದ್ಯಮಿ ಡ್ಯಾನಿಶ್​ ಇಕ್ಬಾಲ್​ ಅವರ ಪತ್ನಿ ನತಾಶಾ ಡ್ಯಾನಿಶ್​, ಕರಾಚಿಯ ಕರ್ಸಾಜ್ ರಸ್ತೆಯಲ್ಲಿ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರು ಚಾಲನೆ ಮಾಡುತ್ತಿದ್ದಳು. ತಿರುವು ಪಡೆಯಲು ಪ್ರಯತ್ನಿಸುವಾಗ ಬೈಕ್​ ಮತ್ತು ಪಾರ್ಕಿಂಗ್​ ಮಾಡಿದ್ದ ಕಾರುಗಳು ಸೇರಿದಂತೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಳು. ಈ ಅಪಘಾತದಲ್ಲಿ ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಮತ್ತು ವೆಂಟಿಲೇಟರ್‌ನಲ್ಲಿದ್ದಾರೆ.

ಅಪಘಾತದ ಬಳಿಕ ಸ್ಥಳದಲ್ಲಿ ನತಾಶಾ ತೋರಿರುವ ವರ್ತನೆ ಜನಾಕ್ರೋಶಕ್ಕೆ ಕಾರಣವಾಗಿದೆ. ಅಪಘಾತದ ಬೆನ್ನಲ್ಲೇ ನತಾಶಾ ಸುತ್ತ ಉದ್ರಿಕ್ತ ಗುಂಪೊಂದು ಸುತ್ತುವರಿದಿತ್ತು. ಸ್ಥಳದಲ್ಲಿ ಪೊಲೀಸರು ಕೂಡ ಇದ್ದರು. ಈ ವೇಳೆ ಅವರತ್ತ ನೋಡುತ್ತಾ ತುಂಬಾ ಅಹಂಕಾರದಲ್ಲಿ ನಗು ಬೀರುತ್ತಾ ನಮ್ಮದು ಪ್ರಭಾವಿ ಕುಟುಂಬ ಎಂದು ಜಂಭದ ಮಾತುಗಳನ್ನಾಡಿದ್ದಾಳೆ. ನಿಮಗೆ ನನ್ನ ತಂದೆ ಯಾರು ಎಂಬುದು ಗೊತ್ತಿಲ್ಲ ಎಂದು ಅಹಂಕಾರದ ಮಾತುಗಳನ್ನಾಡಿದ್ದಾಳೆ.

ಇದೀಗ ನತಾಶಾಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನತಾಶಾ ವರ್ತನೆ ನೋಡಿ ಕಿಡಿಕಾರಿದ್ದಾರೆ. ಇಬ್ಬರು ಅಮಾಯಕರ ಪ್ರಾಣ ತೆಗೆದಿರುವ ಪಶ್ಚಾತಾಪವೂ ಕೂಡ ಆಕೆಯ ಮುಖದಲ್ಲಿ ಇಲ್ಲ. ಇಂಥವರನ್ನು ಜೈಲಿಗೆ ಹಾಕಿ, ಬೇರೆ ಕೈದಿಗಳಂತೆಯೇ ಉಪಚರಿಸಿ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ಡ್ರಗ್ಸ್‌ನ ಅಮಲಿನಲ್ಲಿ ಬಡ ಮತ್ತು ಮುಗ್ಧ ತಂದೆ ಮತ್ತು ಮಗಳನ್ನು ವಾಹನ ಚಲಾಯಿಸಿ ಕೊಲ್ಲುವುದು, ಅವಳ ಮುಖದ ಮೇಲಿನ ದುಷ್ಟ ನಗು, ಹೇ ಸಾಮಾನ್ಯ ಮತ್ತು ಬಡ ಪಾಕಿಸ್ತಾನಿ 'ನಾನು ಯಾರೆಂದು ನಿಮಗೆ ತಿಳಿದಿದೆಯೇ' ಎಂದು ಹೇಳುವುದೆಂದರೆ ಆಕೆಗೆ ಎಷ್ಟು ಹಣದ ಮದವೇರಿರಬಹುದು. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ. ಆಕೆಯ ಅಹಂಕಾರ ಪಾಕಿಸ್ತಾನದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸಿದಂತಿದೆ. ಇಂಥವರಿಗೆ ಹಣದ ಕೊಬ್ಬನ್ನು ಇಳಿಸಬೇಕು. ಈಕೆಗೆ ಕಠಿಣ ಶಿಕ್ಷೆ ನೀಡಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇನ್ನು ಕಾರು ಅಪಘಾತದ ನಂತರ ನತಾಶಾ ಡ್ಯಾನಿಶ್ ಮಾನಸಿಕ ಆರೋಗ್ಯವನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದಾಳೆ. ನತಾಶಾಳ ಮಾನಸಿಕ ಆರೋಗ್ಯವು "ಸ್ಥಿರವಾಗಿಲ್ಲ" ಮತ್ತು ಜಿನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಕೆಯ ವಕೀಲ ಅಮೀರ್ ಮನ್ಸುಬ್ ಹೇಳಿದ್ದಾರೆ. ಆದಾಗ್ಯೂ, ಆಸ್ಪತ್ರೆಯ ದಾಖಲೆಗಳು ಈ ಹೇಳಿಕೆ ಸುಳ್ಳು ಎಂಬುದನ್ನು ಸಾಬೀತುಪಡಿಸುತ್ತವೆ. ವೈದ್ಯಕೀಯ ಮೌಲ್ಯಮಾಪನಗಳ ನಂತರ ನತಾಶಾ ಅವರು ಫಿಟ್ ಆಗಿ ಡಿಸ್ಚಾರ್ಜ್ ಆಗಿದ್ದಾಳೆಂದು ತಿಳಿದುಬಂದಿದೆ. ಪಾಕ್​ನ ಎಂಎಂ ನ್ಯೂಸ್ ಪ್ರಕಾರ, ಆಕೆಗೆ ಮನೋವೈದ್ಯಕೀಯ ನೆರವಿನ ಅಗತ್ಯವಿಲ್ಲ ಎಂದು ವೈದ್ಯರು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net