

ಸಿಡ್ನಿ: ಟೀಮ್ ಇಂಡಿಯಾದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ( Shreyas Iyer ) ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಬಹಳ ಚಿಂತಿತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿರುವ ಅಯ್ಯರ್ ಪ್ರಸ್ತುತ ಸಿಡ್ನಿ ನಗರದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ಅಯ್ಯರ್ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ವರದಿಗಳಿವೆ. ಹೀಗಾಗಿ, ಎಲ್ಲರ ಗಮನ ಇದೀಗ ಅಯ್ಯರ್ ಮೇಲಿದೆ.
ಆಸ್ಟ್ರೇಲಿಯಾದ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಯ್ಯರ್ ಅವರಿಗೆ ಪಕ್ಕೆಲುಬಿನ ಗಾಯವಾಗಿದೆ. ಈ ಗಾಯದ ಪರಿಣಾಮದಿಂದಾಗಿ ಆಂತರಿಕ ರಕ್ತಸ್ರಾವವಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಹಿಮ್ಮುಖವಾಗಿ ಓಡಿ, ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅಲೆಕ್ಸ್ ಕ್ಯಾರಿ ಔಟ್ ಮಾಡುವಲ್ಲಿ ಅಯ್ಯರ್ ಪ್ರಮುಖ ಪಾತ್ರವಹಿಸಿದರು. ಈ ವೇಳೆ ಅವರ ಎಡ ಪಕ್ಕೆಲುಬಿಗೆ ಗಾಯವಾಗಿದ್ದು, ಶನಿವಾರ (ಅ.25) ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟೀಮ್ ಇಂಡಿಯಾದ ವೈದ್ಯರು ಕೂಡ ಸಿಡ್ನಿಯಲ್ಲಿದ್ದು, ಸ್ಥಳೀಯ ವೈದ್ಯರೊಂದಿಗೆ ಅಯ್ಯರ್ ಅವರ ಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಇನ್ನೂ ಅಯ್ಯರ್ ಆರೋಗ್ಯ ಸ್ಥಿತಿಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಕ್ರಿಯೆ ನೀಡಿದೆ. ಕ್ಯಾಚ್ ತೆಗೆದುಕೊಳ್ಳುವಾಗ ಅಯ್ಯರ್ ಅವರ ಪಕ್ಕೆಲುಬುಗಳಿಗೆ (ಎಡ) ಗಾಯವಾಗಿದೆ. ಪ್ರಸ್ತುತ, ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಎಂದಿದೆ.
ಬಿಸಿಸಿಐ ಹೇಳಿದ ಮಾತು ಕೇಳಿ ಅಯ್ಯರ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದಾಗ್ಯೂ, ಇತ್ತೀಚಿನ ಮಾಹಿತಿಯು ಮತ್ತೊಮ್ಮೆ ಅವರನ್ನು ಚಿಂತೆಗೀಡು ಮಾಡಿದೆ. ಅದೇನೆಂದರೆ, ಅಯ್ಯರ್ ಅವರ ಕುಟುಂಬ ಆದಷ್ಟು ಬೇಗ ಸಿಡ್ನಿಗೆ ತೆರಳಲು ತುರ್ತು ವೀಸಾಗೆ ಎದುರು ನೋಡುತ್ತಿದೆ ಎಂದು ಅಯ್ಯರ್ ಕುಟುಂಬಕ್ಕೆ ಹತ್ತಿರವಿರುವ ಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಮಗನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ವೀಸಾ ನೀಡುವಂತೆ ಸಂಬಂಧಿತ ಅಧಿಕಾರಿಗಳನ್ನು ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪಾಲಕರು ತುರ್ತಾಗಿ ಸಿಡ್ನಿಗೆ ಹೋಗಲು ಮುಂದಾಗಿರುವುದರಿಂದ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಮತ್ತೊಮ್ಮೆ ಅನುಮಾನಗಳು ಹುಟ್ಟಿಕೊಂಡಿವೆ.
ಅಂದಹಾಗೆ, ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾಕ್ಕೆ ತೆರಳಿತ್ತು. ಇದರ ಭಾಗವಾಗಿ, ಮೊದಲು ಏಕದಿನ ಸರಣಿಯನ್ನು ಆಡಲಾಯಿತು. ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಗೆದ್ದುಕೊಂಡಿತು. ಶನಿವಾರ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಮಮಾತ್ರ ಮೂರನೇ ಏಕದಿನ ಪಂದ್ಯ ನಡೆಯಿತು. ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿತು. ಹರ್ಷಿತ್ ರಾಣಾ 34 ನೇ ಓವರ್ನಲ್ಲಿ ಚೆಂಡನ್ನು ಹಿಡಿದು ಕ್ರೀಸ್ಗೆ ಪ್ರವೇಶಿಸಿದರು. ಆ ಸಮಯದಲ್ಲಿ ಕ್ರೀಸ್ನಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ ಚೆಂಡನ್ನು ಮಿಡ್-ಆಫ್/ಎಕ್ಸ್ಟ್ರಾ ಕವರ್ ಕಡೆಗೆ ಬಾರಿಸಿದರು. ಈ ವೇಳೆ ಬ್ಯಾಕ್ವರ್ಡ್ ಪಾಯಿಂಟ್ನಿಂದ ಓಡಿ ಬಂದ ಶ್ರೇಯಸ್ ಡೈವ್ ಹೊಡೆದು ಸೆನ್ಸೇಷನಲ್ ಕ್ಯಾಚ್ ಹಿಡಿದರು.
ಕ್ಯಾಚ್ ಹಿಡಿದರು ಆದರೆ, ಎಡ ಪಕ್ಕೆಲುಬುಗಳಲ್ಲಿ ನೋವಿನಿಂದ ನರಳುತ್ತಾ ಅಯ್ಯರ್ ಅವರು ಮೈದಾನದಲ್ಲಿ ಕುಸಿದು ಬಿದ್ದರು. ತಂಡದ ಸದಸ್ಯರು ಮತ್ತು ಫಿಸಿಯೋ ತಕ್ಷಣ ಓಡಿ ಬಂದು ಅವರನ್ನು ಪರೀಕ್ಷಿಸಿದರು. ಗಾಯವು ತುಂಬಾ ತೀವ್ರವಾಗಿದ್ದರಿಂದ, ಅವರನ್ನು ಸ್ಕ್ಯಾನಿಂಗ್ಗಾಗಿ ಸಿಡ್ನಿಯ ಆಸ್ಪತ್ರೆಗೆ ಕಳುಹಿಸಲಾಯಿತು. ಈ ವೇಳೆ ಆಂತರಿಕ ರಕ್ತಸ್ರಾವ ಆಗಿರುವುದನ್ನು ವೈದ್ಯರು ಪತ್ತೆಹಚ್ಚಿದರು ಮತ್ತು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಅಯ್ಯರ್ ಅವರನ್ನು ಇನ್ನೂ ಏಳು ದಿನಗಳವರೆಗೆ ಐಸಿಯುನಲ್ಲಿ ಇರಿಸಲಾಗುವುದು ಎಂದು ತಿಳಿದುಬಂದಿದೆ.
ಅಂದಹಾಗೆ, ಅಯ್ಯರ್ ಭಾರತದ ಟಿ20 ತಂಡದ ಭಾಗವಾಗಿಲ್ಲ. ಒಂದು ವೇಳೆ ಚೇತರಿಕೆ ಕಾಣುವುದು ವಿಳಂಬವಾದರೆ ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಅಯ್ಯರ್ ಹೊರಗುಳಿಯುವ ಸಾಧ್ಯತೆ ಇದೆ. (ಏಜೆನ್ಸೀಸ್)