

ಸಿಡ್ನಿ: ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಅಯ್ಯರ್ ( Shreyas Iyer ) ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ. ಪ್ರಸ್ತುತ ಅವರನ್ನು ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಆಸ್ಟ್ರೇಲಿಯಾದ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಯ್ಯರ್ ಅವರಿಗೆ ಪಕ್ಕೆಲುಬಿನ ಗಾಯವಾಗಿದೆ. ಈ ಗಾಯದ ಪರಿಣಾಮದಿಂದಾಗಿ ಆಂತರಿಕ ರಕ್ತಸ್ರಾವವಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಹಿಮ್ಮುಖವಾಗಿ ಓಡಿ, ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅಲೆಕ್ಸ್ ಕ್ಯಾರಿ ಔಟ್ ಮಾಡುವಲ್ಲಿ ಅಯ್ಯರ್ ಪ್ರಮುಖ ಪಾತ್ರವಹಿಸಿದರು. ಈ ವೇಳೆ ಅವರ ಎಡ ಪಕ್ಕೆಲುಬಿಗೆ ಗಾಯವಾಗಿದ್ದು, ಶನಿವಾರ (ಅ.25) ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕಳೆದ ಎರಡು ದಿನಗಳಿಂದ ಅಯ್ಯರ್ ಐಸಿಯುನಲ್ಲಿದ್ದಾರೆ. ರಕ್ತಸ್ರಾವದಿಂದಾಗಿ ಸೋಂಕು ಹರಡುವುದನ್ನು ತಡೆಯಬೇಕಾಗಿದೆ. ಹೀಗಾಗಿ ಅಯ್ಯರ್ ಅವರ ಚೇತರಿಕೆಯ ಆಧಾರದ ಮೇಲೆ ಅವರು ಎರಡರಿಂದ ಏಳು ದಿನಗಳವರೆಗೆ ಐಸಿಯುನಲ್ಲಿ ಇರುತ್ತಾರೆಂದು ಕ್ರೀಡಾ ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಯ್ಯರ್ ಅವರು ಪಂದ್ಯ ಮುಗಿಸಿ ಡ್ರೆಸ್ಸಿಂಗ್ ಕೋಣೆಗೆ ಮರಳಿದ ಬೆನ್ನಲ್ಲೇ ಅವರ ಬಿಪಿ, ನಾಡಿ ಮಿಡಿತ, ದೇಹದ ಉಷ್ಣಾಂಶ ಹಾಗೂ ಉಸಿರಾಟದ ಪ್ರಮಾಣವನ್ನು ಪರೀಕ್ಷೆ ಮಾಡಲಾಯಿತು. ಅದರಲ್ಲಿ ಏರಿಳಿತಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಸಿಸಿಐ ವೈದ್ಯರು ಮತ್ತು ಭೌತಚಿಕಿತ್ಸಕರು ತಕ್ಷಣವೇ ಎಚ್ಚೆತ್ತುಕೊಂಡು ಅಯ್ಯರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರಂಭದಲ್ಲಿ, ಅಯ್ಯರ್ ಸುಮಾರು ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯುತ್ತಾರೆಂದು ನಿರೀಕ್ಷಿಸಲಾಗಿತ್ತು, ಆದರೆ ಈಗ ಚೇತರಿಕೆಯ ಅವಧಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವುದರಿಂದ, ಅಯ್ಯರ್ ಅವರು ಚೇತರಿಸಿಕೊಳ್ಳಲು ಖಂಡಿತವಾಗಿಯೂ ಹೆಚ್ಚಿನ ಸಮಯ ಬೇಕಾಗುತ್ತದೆ ಮತ್ತು ಈ ಹಂತದಲ್ಲಿ, ಅವರು ಕ್ರಿಕೆಟ್‌ಗೆ ಮರಳುವ ಬಗ್ಗೆ ನಿರ್ದಿಷ್ಟ ಸಮಯ ನಿಗದಿಪಡಿಸುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.
31 ವರ್ಷದ ಅಯ್ಯರ್ ಟೀಮ್ ಇಂಡಿಯಾಗೆ ಮರಳಲು ಫಿಟ್ ಆಗಿದ್ದಾರೆಂದು ಘೋಷಿಸುವ ಮೊದಲು ಕನಿಷ್ಠ ಒಂದು ವಾರ ಸಿಡ್ನಿ ಆಸ್ಪತ್ರೆಯಲ್ಲಿ ಉಳಿಯುವ ಸಾಧ್ಯತೆ ಇದೆ. ಅಂದಹಾಗೆ, ಅಯ್ಯರ್ ಭಾರತದ ಟಿ20 ತಂಡದ ಭಾಗವಾಗಿಲ್ಲ. ಒಂದು ವೇಳೆ ಚೇತರಿಕೆ ಕಾಣುವುದು ವಿಳಂಬವಾದರೆ ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಅಯ್ಯರ್ ಹೊರಗುಳಿಯುವ ಸಾಧ್ಯತೆ ಇದೆ. (ಏಜೆನ್ಸೀಸ್)