

ನವದೆಹಲಿ: ಲಾಕ್ಡೌನ್ ಸಮಯದಲ್ಲಿ ವಿವಿಧ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜತೆಗೆ ಮಾಹಿತಿ ಹಂಚಿಕೊಳ್ಳುತ್ತಲೇ ಬಂದಿರುವ ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್ ಮತ್ತೊಮ್ಮೆ ಗಮನಸೆಳೆದಿದ್ದಾರೆ. ಈ ಬಾರಿ ಅವರು ಸರಾಗವಾಗಿ ಕುದುರೆ ಸವಾರಿ ಮಾಡಿದ್ದಲ್ಲದೆ, ಕುದುರೆ ಸವಾರಿಯನ್ನು ಮಗನಿಗೂ ಕಲಿಸಿಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಗ ಜೊರಾವರ್ಗೆ ಶಿಖರ್ ಧವನ್ ಕುದುರೆ ಸವಾರಿಯ ಪಾಠಗಳನ್ನು ಹೇಳಿಕೊಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಮೊದಲಿಗೆ ತಾವೇ ಕುದುರೆ ಸವಾರಿ ಮಾಡಿರುವ ಧವನ್, ಬಳಿಕ ಮಗನನ್ನೂ ಕುದುರೆ ಮೇಲೆ ಕುಳಿತುಕೊಳ್ಳಿಸಿದ್ದಾರೆ. ಕುದುರೆ ಜತೆಜತೆಯಲ್ಲೇ ಧವನ್ ಕೂಡ ಓಡಿದ್ದಾರೆ. ಧವನ್ ಮತ್ತು ಮಗನ ಕುದುರೆ ಸವಾರಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕುದುರೆ ಸವಾರಿಯ ಆನಂದವನ್ನು ಜೊರಾವರ್ಗೂ ಕಲಿಸುತ್ತಿದ್ದೇನೆ. ನಮ್ಮ ಹೊಸ ಗೆಳೆಯನ ಜತೆಗೆ ಕಳೆದ ಸಮಯವನ್ನು ಅವನೂ ಆನಂದಿಸಿದ್ದಾನೆ ಎಂದು ಶಿಖರ್ ಧವನ್ ಟ್ವಿಟರ್ನಲ್ಲಿ ಬರೆದಿದ್ದಾರೆ. ಶಿಖರ್ ಧವನ್ ವರ್ಷಾರಂಭದಲ್ಲಿ ಆಸ್ಟ್ರೆಲಿಯಾ ವಿರುದ್ಧ ಏಕದಿನ ಸರಣಿ ಆಡಿದ ಬಳಿಕ ಯಾವುದೇ ಪಂದ್ಯವನ್ನು ಆಡಿಲ್ಲ. ಗಾಯದಿಂದಾಗಿ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರೆ, ದಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಆಡಲು ಸಿದ್ಧರಾದಾಗ ಕರೊನಾ ಹಾವಳಿಯಿಂದಾಗಿ ಸರಣಿ ಮೊಟಕುಗೊಂಡಿತ್ತು.