ಸಂಬಳ 60 ಸಾವಿರ, ಕಾರಿನ ವಿಮೆ 80 ಸಾವಿರ! ಬಿಎಂಡಬ್ಲ್ಯು ಮೆಂಟೆನನ್ಸ್​ಗೆ ದ್ಯುತಿ ಪರದಾಟ

duti
Published on

ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ ಮುಂದೂಡಿಕೆಯಿಂದಾಗಿ ಆಥಿರ್ಕ ಸಮಸ್ಯೆ ಎದುರಾದ ಕಾರಣ ತರಬೇತಿ ವೆಚ್ಚಕ್ಕಾಗಿ ತನ್ನ ಕಾರು ಮಾರಾಟ ಮಾಡುತ್ತಿರುವುದಾಗಿ ಅಥ್ಲೀಟ್​ ದ್ಯುತಿ ಚಂದ್​ ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ ಕಾರು ಮಾರಾಟಕ್ಕೆ ಕಾರಣವೇನೆಂದು ಸಂಪೂರ್ಣ ವಿವರಣೆ ಅವರದೇ ಬಾಯಿಯಿಂದ ಕೇಳಿಸಿಕೊಂಡ ಬಳಿಕ ಅವರು, ಕಾರು ಮಾರಾಟಕ್ಕೆ ಇಟ್ಟಿರುವ ಅಸಲಿ ಕಾರಣ ಬೇರೆಯೇ ಇರುವಂತೆ ಕಂಡುಬಂದಿದೆ. ಅಲ್ಲದೆ ಕಾರಿಗೆ ಉತ್ತಮ ಬೆಲೆ ಪಡೆದುಕೊಳ್ಳುವ ಸಲುವಾಗಿ ತರಬೇತಿ ವೆಚ್ಚದ ಕಥೆ ಕಟ್ಟಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ.

2018ರಲ್ಲಿ ಒಡಿಶಾ ಸರ್ಕಾರ ನೀಡಿದ 3 ಕೋಟಿ ರೂ. ಬಹುಮಾನ ಮೊತ್ತದಲ್ಲಿ 30 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು ಖರೀದಿಸಿದ್ದಾಗಿ ಭಾರತದ ವೇಗದ ಓಟಗಾರ್ತಿ ದ್ಯುತಿ ಚಂದ್​ ಹೇಳಿಕೊಂಡಿದ್ದರು. ಜತೆಗೆ, ನನ್ನ ಮಾಸಿಕ ವೇತನ 60 ಸಾವಿರ ರೂ. ಕಾರಿನ ವಾರ್ಷಿಕ ವಿಮೆಯೇ 80 ಸಾವಿರ ರೂ. ಆಗುತ್ತದೆ. ಇನ್ನು ಕಾರಿನ ಯಾವುದಾದರು ಬಿಡಿಭಾಗಕ್ಕೆ ಹಾನಿಯಾದರೆ ಕನಿಷ್ಠ 20 ಸಾವಿರ ರೂ. ವ್ಯಯಿಸಬೇಕಾಗುತ್ತದೆ ಎಂದು ವಿವರಣೆ ನೀಡಿದ್ದರು. ಇದರಿಂದ 24 ವರ್ಷದ ದ್ಯುತಿ ಚಂದ್​ಗೆ ತರಬೇತಿ ವೆಚ್ಚಕ್ಕಿಂತ ಕಾರಿನ ಮೆಂಟೆನನ್ಸ್​ ದೊಡ್ಡ ತಲೆನೋವಾಗಿ ಪರಿಣಮಿಸಿರುವಂತಿದೆ. ಅಲ್ಲದೆ ಅವರ ಬಳಿ ಇತರ 2 ಕಾರು ಇರುವುದಾಗಿಯೂ ಹೇಳಿಕೊಂಡಿದ್ದರು. ಅವರು ಒಡಿಶಾ ಮೈನಿಂಗ್​ ಕಾರ್ಪೋರೇಷನ್​ನಲ್ಲಿ ಎಕ್ಸಿಕ್ಯೂಟಿವ್​ ಆಫೀಸರ್​ ಆಗಿ ಉದ್ಯೋಗದಲ್ಲಿದ್ದಾರೆ.

2016ರ ರಿಯೋ ಒಲಿಂಪಿಕ್ಸ್​ನಲ್ಲಿ 100 ಮೀಟರ್​ ಓಟದಲ್ಲಿ ಸ್ಪರ್ಧಿಸಿದರೂ, ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ದ್ಯುತಿ ಟೋಕಿಯೊ ಒಲಿಂಪಿಕ್ಸ್​ಗೆ ಇನ್ನೂ ಅರ್ಹತೆಯನ್ನೇ ಸಂಪಾದಿಸಿಲ್ಲ. ಒಡಿಶಾದ ಬಡ ಕುಟುಂಬದಲ್ಲಿ ಜನಿಸಿದರೂ, ದ್ಯುತಿ ಅವರ ಇತ್ತೀಚೆಗಿನ ಜೀವನ ಶ್ರೀಮಂತವಾಗಿದೆ. ತಾನು ಸಲಿಂಗಿ ಮತ್ತು ತಮ್ಮೂರಿನ ಹುಡುಗಿಯೊಬ್ಬಳ ಜತೆಗೆ ಸಂಬಂಧ ಹೊಂದಿದ್ದೇನೆ ಎಂದು ಕಳೆದ ವರ್ಷವಷ್ಟೇ ಬಹಿರಂಗಪಡಿಸಿದ್ದ ದ್ಯುತಿ, 70 ಲಕ್ಷ ರೂ. ವೆಚ್ಚದಲ್ಲಿ ದೊಡ್ಡ ಮನೆಯನ್ನೂ ನಿಮಿರ್ಸಿದ್ದಾರೆ. ಈ ನಡುವೆ ಅವರ ಸಲಿಂಗಿ ಸಂಬಂಧಕ್ಕೆ ಕುಟುಂಬದ ವಿರೋಧವಿದ್ದು, ಹಿರಿಯ ಅಕ್ಕನಿಂದ ತನಗೆ ಬೆದರಿಕೆ ಇದೆ ಎಂದೂ ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net