

ನವದೆಹಲಿ: ಟೀಮ್ ಇಂಡಿಯಾದ ಲೆಜೆಂಡರಿ ಆಟಗಾರ ಆರ್. ಅಶ್ವಿನ್ (Ashwin) ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (Border-Gavaskar Trophy Test Series) ಮಧ್ಯದಲ್ಲೇ ನಿವೃತ್ತಿಯನ್ನು ಘೋಷಿಸುವ ಮೂಲಕ ಅಚ್ಚರಿಗೆ ಕಾರಣವಾಗಿದ್ದರು. ಇನ್ನೂಅಶ್ವಿನ್ ನಿವೃತ್ತಿ ಘೋಷಿಸಿರುವ ನಿರ್ಧಾರಕ್ಕೆ ಈಗಲೂ ಹಲವರು ಅಚ್ಚರಿ ವ್ಯಕ್ತಪಡಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಅಶ್ವಿನ್ರನ್ನು ಸ್ವಾರ್ಥಿ ಎಂದು ಕರೆದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಡೆರಿಲ್ ಕಲ್ಲಿನನ್, ಅಶ್ವಿನ್ ಬಾರ್ಡರ್-ಗವಾಸ್ಕರ್ ಟ್ರೋಫಿ ಮಧ್ಯದಲ್ಲಿ ನಿವೃತ್ತಿಯನ್ನು ಘೋಷಿಸಿದರು. ಸರಣಿಯಲ್ಲಿ ಒಂದು ಪಂದ್ಯವನ್ನು ಆಡಿದ್ದ ಅಶ್ವಿನ್ ಯಾವುದೇ ವಿದಾಯ ಆಟವಿಲ್ಲದೆ ನಿರ್ಗಮಿಸಿದರು. ಅವರು ಸಾಧ್ಯವಾದಷ್ಟು ನಿರ್ಲಕ್ಷವಾಗಿ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದು, ಇದು ಅವರ ಸ್ವಾರ್ಥ ನಡೆಯಾಗಿದೆ.
ನನ್ನ ಪ್ರಕಾರ ಅಶ್ವಿನ್ ಅವರಿಗೆ ಸರಣಿಯ ಮಧ್ಯದಲ್ಲಿ ನಿವೃತ್ತಿ ಘೋಷಿಸಲು ಅವಕಾಶ ನೀಡಬಾರದಿತ್ತು. ಅವರು ನಿವೃತ್ತಿಗೆ ಸ್ಪಷ್ಟ ಕಾರಣಗಳನ್ನು ಉಲ್ಲೇಖಿಸದೆ ತಮ್ಮ ಸ್ವಾರ್ಥವನ್ನು ತೋರಿಸಿದ್ದಾರೆ. ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳದಿರುವುದಕ್ಕೆ ಈ ರೀತಿ ಮಾಡಿದ್ದರೆ ಅದು ಸರಿ ಹೋಗುವುದಿಲ್ಲ. ಸಿಡ್ನಿ ಟೆಸ್ಟ್ ಬಳಿಕ ನಿವೃತ್ತಿ ಘೋಷಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಡೆರಿಲ್ ಕಲ್ಲಿನನ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಅಶ್ವಿನ್ (R Ashwin) ಅವರು 106 ಟೆಸ್ಟ್ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳನ್ನು ಪಡೆದು ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್ ಕೊನೆಗೊಳಿಸಿದರು. ಬೌಲಿಂಗ್ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್‌ಗಳನ್ನು ಗಳಿಸಿ, ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್‌ಗಳೊಂದಿಗೆ 11 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.