ನಾನು ಬಿಡೋದೆ ಇಲ್ಲ... ಸೆಲ್ಫಿ ವೇಳೆ ಮಹಿಳೆಯ ವರ್ತನೆ ಕಂಡು ಕಕ್ಕಾಬಿಕ್ಕಿಯಾದ ಕೊಹ್ಲಿ! ವಿಡಿಯೋ ವೈರಲ್... Virat Kohli

Virat Kohli
Published on

Virat Kohli : ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಕಣ್ಮುಂದೆ ನೋಡಿದರೆ ಸಾಕು ಅಭಿಮಾನಿಗಳಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹೇಗಾದರೂ ಮಾಡಿ ಒಂದೇ ಒಂದು ಫೋಟೋ ಅಥವಾ ವಿಡಿಯೋ ತೆಗೆದುಕೊಳ್ಳಲು ಬಯಸುತ್ತಾರೆ. ಸದ್ಯ ಇಂಥದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರನ್​ ಮೆಶಿನ್, ದಾಖಲೆಗಳ ಸರದಾರ ಎಂದೇ ಪ್ರಖ್ಯಾತಿಯಾಗಿರುವ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ​ ವಿರಾಟ್ ಕೊಹ್ಲಿ ಅಂದರೆ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ಕೊಹ್ಲಿಗಿರುವ ಕ್ರೇಜ್​ ಬೇರೆ ಯಾವ ಕ್ರಿಕೆಟಿಗರಿಗೂ ಇಲ್ಲ ಎಂದು ಹೇಳಬಹುದು. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲೇ ಕೊಹ್ಲಿಗೆ ಅಭಿಮಾನಿ ಬಳಗ ಇರುವಾಗ ನಮ್ಮ ಭಾರತದಲ್ಲಿ ಕೇಳಬೇಕಾ! ಕೊಹ್ಲಿ ಅಂದರೆ ಮುಗಿ ಬೀಳುತ್ತಾರೆ. ಹೀಗಿರುವಾಗ ಕೊಹ್ಲಿ ಅಕಸ್ಮಾತ್​ ಆಗಿ ಎದುರಾದರೆ ಅಭಿಮಾನಿಯ ಉತ್ಸಾಹ ಹೇಗಿರುತ್ತದೆ ಗೊತ್ತಾ? ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಮಹಿಳೆಯೊಬ್ಬರು ಬಹಳ ಉತ್ಸಾಹದಿಂದ ಕೊಹ್ಲಿ ಜತೆ ಸೆಲ್ಫಿ ತೆಗೆಸಿಕೊಂಡ ವಿಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ವಿರಾಟ್‌ನನ್ನು ನೋಡಿದ ತಕ್ಷಣ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ಕೇಳಿ ವಿರಾಟ್ ಕೂಡ ನಿಂತು ಮಾತನಾಡಿಸುತ್ತಾರೆ. ಆದರೆ, ಮಹಿಳೆ ಫೋನ್ ತೆಗೆದು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದಾಗ ಗೊಂದಲಕ್ಕೀಡಾಗುತ್ತಾಳೆ. ವಿರಾಟ್ ಸೆಲ್ಫಿ ತೆಗೆಸಿಕೊಳ್ಳದೆ ಹೊರಟು ಹೋಗುತ್ತಾರೆ ಎಂದು ಭಾವಿಸಿದ ಮಹಿಳೆ, ಕೊಹ್ಲಿ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಇದರಿಂದಾಗಿ ಕೊಹ್ಲಿಗೆ ಕೊಂಚ ಮುಜುಗರ ಉಂಟಾಗುತ್ತದೆ. ಮಹಿಳೆಯ ಫೋನ್ ಕ್ಯಾಮೆರಾ ಬೇಗ ತೆರೆಯದ ಕಾರಣ ಅಲ್ಲಿಯೇ ನಿಂತಿದ್ದ ಛಾಯಾಗ್ರಾಹಕರು ಆಕೆಯ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಆ ಬಳಿಕ ವಿರಾಟ್ ಅಲ್ಲಿಂದ ನಿರ್ಗಮಿಸುತ್ತಾರೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ಮಹಿಳೆ ಕೊಹ್ಲಿ ಹಿಂದೆಯೇ ಓಡಿ ಹೋಗುತ್ತಾರೆ. ಅಷ್ಟರಲ್ಲಿ ಕೊಹ್ಲಿ ಹೋಟೆಲ್​ ಒಳಗೆ ಹೋಗುತ್ತಾರೆ. ಸುಮಾರು 28 ಸೆಕೆಂಡಿನ ವಿಡಿಯೋ ಇಲ್ಲಿಗೆ ಕೊನೆಗೊಳ್ಳುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಬಾಕ್ಸ್​ನಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಸರಳತೆಯನ್ನು ಅನೇಕರು ಮೆಚ್ಚಿದ್ದಾರೆ. ಕೊಹ್ಲಿ ತಮ್ಮ ಅಭಿಮಾನಿಗಳಿಗೆ ತಮ್ಮ ಪ್ರೀತಿಯನ್ನು ತೋರಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಮಹಿಳೆಯ ವರ್ತನೆಯನ್ನು ಟೀಕಿಸಿದ್ದಾರೆ. ದಯವಿಟ್ಟು ವಿರಾಟ್‌ ಅವರ ಖಾಸಗಿತನವನ್ನು ಗೌರವಿಸಿ, ಈ ರೀತಿ ಕೈ ಹಿಡಿಯುವುದು ಒಳ್ಳೆಯದಲ್ಲ ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net