ಬ್ರೇಕಪ್​ ಬಳಿಕ ಎಷ್ಟೇ ಪ್ರಯತ್ನಿಸಿದ್ರೂ ಮಾಜಿ ಲವರ್​ ಮರೆಯೋಕಾಗ್ತಿಲ್ವಾ? ಇಲ್ಲಿವೆ ನೋಡಿ ಸಿಂಪಲ್​ ಟಿಪ್ಸ್​... Love Breakup

Love Breakup
Published on

Love Breakup : ಲವ್ ಬ್ರೇಕಪ್​ ನಂತರ ಅನೇಕ ಜನರು ಜೀವನದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುತ್ತಾರೆ. ಹಳೆಯದ್ದನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಅದರ ಕೊರಗಿನಲ್ಲೇ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಆದರೆ, ಎಲ್ಲವನ್ನು ಮರೆತು ತಮ್ಮ ಸಹಜ ಜೀವನಕ್ಕೆ ಮರಳುವುದು ಬಹಳ ಮುಖ್ಯ. ಆದರೆ, ಕೆಲವರಿಗೆ ಎಷ್ಟೇ ಹೇಳಿದರೂ ಬ್ರೇಕಪ್​ ನೋವಿನಿಂದ ಹೊರಬರುವುದೇ ಇಲ್ಲ. ನೀವು ಸಹ ಬ್ರೇಕಪ್‌ ನೋವಿನಲ್ಲಿದ್ದೀರಾ? ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ? ಈ ಸಲಹೆಗಳನ್ನು ತಪ್ಪದೇ ಅನುಸರಿಸಿ.

ಇತ್ತೀಚಿನ ದಿನಗಳಲ್ಲಿ ಪ್ರೀತಿಯಲ್ಲಿ ಬೀಳುವುದು ಸಾಮಾನ್ಯವಾಗಿದೆ. ಪ್ರತಿ ಸಂಬಂಧವು ಪ್ರೀತಿ, ನಿರೀಕ್ಷೆಗಳು ಮತ್ತು ಅಗತ್ಯಗಳನ್ನು ಒಳಗೊಂಡಿರುತ್ತದೆ. ಈ ಮೂರರಲ್ಲಿ ಯಾವುದಾದರೂ ಒಂದು ಕಡಿಮೆಯಾದರೆ ಆ ಸಂಬಂಧ ಹದಗೆಡುವುದಂತೂ ಖಚಿತ. ಅದರಲ್ಲೂ ನೀವು ತುಂಬಾ ಪ್ರೀತಿಸುವ ಸಂಗಾತಿ ನಿಮ್ಮನ್ನು ಬಿಟ್ಟು ಹೋದರೆ ಆ ನೋವು ತುಂಬಾ ಕಾಡುತ್ತದೆ.

ಪ್ರೇಮವಾಗಲಿ ಅಥವಾ ಮದುವೆಯ ನಂತರದ ಜೀವನವಾಗಲಿ ಕೆಲ ಕೆಟ್ಟ ಸಮಯ ಬಂದೇ ಬರುತ್ತದೆ. ಈ ಸಮಯದಲ್ಲಿ ಸ್ವಲ್ಪ ದುಡುಕಿದರೂ ಸಂಬಂಧ ಒಡೆಯುವ ಸಾಧ್ಯತೆಯಿದೆ. ಅಂತಹ ಸಮಯದಲ್ಲಿ ಕೆಲವರು ಒಂಟಿತನ ಅನುಭವಿಸಲು ಪ್ರಾರಂಭಿಸುತ್ತಾರೆ. ಅಲ್ಲದೆ, ಸಂಗಾತಿಯ ನೆನಪುಗಳು ಮತ್ತೆ ಮತ್ತೆ ಕಾಡುವ ಮೂಲಕ ತುಂಬಾ ಹಿಂಸೆಯಾಗುತ್ತದೆ. ಹೀಗಾಗಿ ಹಳೆಯ ನೆನೆಪುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಹಾಗಾದ್ರೆ, ಬ್ರೇಕಪ್ ಬಳಿಕ ಸಂಗಾತಿಯನ್ನು ಮರೆಯಲು ಏನು ಮಾಡಬೇಕು? ಮನಶ್ಶಾಸ್ತ್ರಜ್ಞರು ನೀಡುವ ವಿಶೇಷ ಸಲಹೆಗಳನ್ನು ನೀವು ಅನುಸರಿಸಬೇಕು.\

ಬ್ರೇಕಪ್ ಆದ ನಂತರ ಮೊದಲು ನೀವು ಮಾಡಬೇಕಾದ ಕೆಲಸ ಏನೆಂದರೆ, ಸಾಮಾಜಿಕ ಜಾಲತಾಣದಲ್ಲಿ‘ ನಿಮ್ಮ ಮಾಜಿ ಸಂಗಾತಿಯನ್ನು ಅನ್ ಫಾಲೋ ಮಾಡಬೇಕು. ಜಾಲತಾಣಗಳಲ್ಲಿ ಅವರನ್ನು ಪದೇ ಪದೇ ಫಾಲೋ ಮಾಡಬೇಡಿ. ಇನ್ನು ಬ್ರೇಕಪ್ ಅಥವಾ ವಿಚ್ಛೇದನದ ನಂತರವೂ ನಿಮ್ಮನ್ನು ನೀವು ಪ್ರೀತಿಸಲು ಮರೆಯಬೇಡಿ. ಏಕೆಂದರೆ ಅಂತಹ ಸಮಯದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.

ಅಂದಹಾಗೆ ಸಂಬಂಧದಲ್ಲಿ ಇಬ್ಬರೂ ತಪ್ಪು ಮಾಡುವುದು ಸಹಜ. ನಿಮ್ಮ ಮಾಜಿ ಸಂಗಾತಿಯ ತಪ್ಪುಗಳನ್ನು ನೀವು ಕ್ಷಮಿಸಿದರೆ, ನೀವು ಸಂತೋಷದಿಂದ ಮತ್ತು ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ. ಕ್ಷಮಿಸುವ ಗುಣವನ್ನು ಬೆಳಸಿಕೊಂಡರೆ ನಿಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ. ತಾಳ್ಮೆ ತುಂಬಾ ಮುಖ್ಯ. ಬ್ರೇಕಪ್​ ಆದ ಬಳಿಕ ತುಂಬಾ ತಾಳ್ಮೆ ವಹಿಸಿ, ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಭಾವಿಸಿ ಮತ್ತು ಒಳ್ಳೆಯ ದಿನಗಳು ಬರುತ್ತವೆ ಅನ್ನೋ ಆಶಾ ಭಾವನೆಯನ್ನು ಬೆಳೆಸಿಕೊಳ್ಳಿ.

ಬ್ರೇಕಪ್​ ಆದ ಬಳಿಕ ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕಿ ಕೊರಗುವ ಬದಲು ಹೊರ ಪ್ರಪಂಚದ ಸವಿಯನ್ನು ಸವಿಯಿರಿ. ನಿಮ್ಮನ್ನು ನೀವು ತುಂಬಾ ಬಿಜಿಯಾಗಿಡಿ. ನಿಮ್ಮಿಷ್ಟದ ಕೆಲಸದ ಕಡೆ ಹೆಚ್ಚಿನ ಒತ್ತು ನೀಡಿ. ಇಷ್ಟೆಲ್ಲ ಸಲಹೆಗಳನ್ನು ಅನುಸರಿಸಿದರೆ ಬ್ರೇಕಪ್​ ಆದರೂ ನಿಮ್ಮ ಹೃದಯ ಬ್ರೇಕ್​ ಆಗುವುದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net