ಮುಂಬೈ: ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ( Ranveer Singh ) ಮತ್ತು ದೀಪಿಕಾ ಪಡುಕೋಣೆ ( Deepika Padukone ) ಇತ್ತೀಚೆಗಷ್ಟೇ ತಮ್ಮ ಮಗಳ ಹೆಸರನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡರು. ದೀಪಾವಳಿಯ ಶುಭ ದಿನದಂದೇ ಮುದ್ದಿನ ಮಗಳ ಹೆಸರನ್ನು ಜಗತ್ತಿಗೆ ಪರಿಚಯಿಸಿದರು. ಆದರೀಗ ಮಗಳ ಹೆಸರಿನ ಕಾರಣಕ್ಕೆ ಸ್ಟಾರ್ ದಂಪತಿ ಟ್ರೋಲ್ಗೆ ಗುರಿಯಾಗಿದ್ದಾರೆ.
ದೀಪ್ವೀರ್ ಎಂದೇ ಹೆಸರಾಗಿರುವ ದೀಪಿಕಾ ಮತ್ತು ರಣವೀರ್ ತಮ್ಮ ಮಗುವಿಗೆ ‘ದುವಾ ಪಡುಕೋಣೆ ಸಿಂಗ್’ ಎಂದು ಹೆಸರಿಟ್ಟಿದ್ದಾರೆ. ದುವಾ ಅಂದರೆ ಪ್ರಾರ್ಥನೆ ಎಂದರ್ಥ. ಹೆಸರು ಬಹಿರಂಗಪಡಿಸುವುದರ ಜೊತೆಗೆ ಮಗುವಿನ ಸುಂದರವಾದ ಕಾಲಿನ ಫೋಟೋವನ್ನು ಸಹ ದಂಪತಿ ಹಂಚಿಕೊಂಡಿದ್ದರು.
ದುವಾ ಅಂದರೆ ಪ್ರಾರ್ಥನೆ ಎಂದರ್ಥ. ಏಕೆಂದರೆ, ನಮ್ಮ ಪ್ರಾರ್ಥನೆಗೆ ಆಕೆಯೇ ಉತ್ತರ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಗಳಿಂದ ತುಂಬಿದೆ ಎಂದು ದೀಪಿಕಾ ಮತ್ತು ರಣವೀರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ದೀಪಿಕಾ, ರಣವೀರ್ ದಂಪತಿಯ ಮಗಳ ಫೋಟೋಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.
ಆದರೆ, ತಮ್ಮ ಮಗುವಿಗೆ ಇಟ್ಟ ಹೆಸರಿನಿಂದಲೇ ತಾರಾ ದಂಪತಿ ಸೈಬರ್ ದಾಳಿಯನ್ನು ಎದುರಿಸುತ್ತಿದ್ದಾರೆ. ಜಾಲತಾಣದಲ್ಲಿ ಹೆಚ್ಚಿನ ಮಂದಿ, ದುವಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ದುವಾ ಹೆಸರಿನ ಮೂಲ ಮುಸ್ಲಿಂ ಧರ್ಮದ್ದು ಎಂದು ಕೆಲವರು ನಂಬಿದ್ದಾರೆ. ತಮ್ಮ ಮಗುವಿಗೆ ಮುಸ್ಲಿಂ ಹೆಸರನ್ನು ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ತಾರಾದಂಪತಿ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
‘ಪ್ರಾರ್ಥನಾ’ ಎಂಬ ಸಾಂಪ್ರದಾಯಿಕ ಹಿಂದು ಹೆಸರಿನ ಬದಲು ದೀಪಿಕಾ ಮತ್ತು ರಣವೀರ್ ತಮ್ಮ ಮಗುವಿಗೆ ದುವಾ ಎಂದು ಏಕೆ ಹೆಸರಿಟ್ಟಿದ್ದಾರೆ ಎಂದು ಕೆಲವರು ಕೇಳುತ್ತಿದ್ದಾರೆ. ನೀವಿಬ್ಬರೂ ಹಿಂದುಗಳು ಎಂಬುದನ್ನು ಮರೆತಿದ್ದೀರಾ? ಎಂದು ಕಿಡಿಕಾರುತ್ತಿದ್ದಾರೆ. ಈ ಬಗ್ಗೆ ದೀಪಿಕಾ ಮತ್ತು ರಣವೀರ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಅಂದಹಾಗೆ ದೀಪಿಕಾ-ರಣವೀರ್ 2018ರಲ್ಲಿ ಇಟಲಿಯಲ್ಲಿ ಮದುವೆಯಾದರು. ಇಬ್ಬರು ಮೊದಲ ಬಾರಿಗೆ ‘ರಾಮಲೀಲಾ’ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. 5 ವರ್ಷಗಳ ಪ್ರೀತಿಯ ನಂತರ 2018ರಲ್ಲಿ ಮದುವೆಯಾದರು. ‘ಗೋಲಿಯೋನ್ ಕಿ ರಾಸ್ಲೀಲಾ: ರಾಮಲೀಲಾ’, ‘ಪದ್ಮಾವತ್’, ‘ಬಾಜಿರಾವ್ ಮಸ್ತಾನಿಸಾ’ ಮತ್ತು ’83’ ಚಿತ್ರಗಳಲ್ಲಿ ದೀಪಿಕಾ ಮತ್ತು ರಣವೀರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)
ಮಗಳ ಫೋಟೋ, ಹೆಸರು ಬಹಿರಂಗಪಡಿಸಿದ ದೀಪ್ವೀರ್: ದುವಾ ಹೆಸರಿನ ಅರ್ಥವೇನು ಗೊತ್ತಾ? Deepika Padukone