98 ಪಂದ್ಯಗಳಲ್ಲಿ ಧೋನಿಯಿಂದಲೂ ಸಾಧ್ಯವಾಗದ್ದನ್ನು ಕೇವಲ 45 ಪಂದ್ಯಗಳಲ್ಲೇ ಸಾಧಿಸಿದ ಸಂಜು ಸ್ಯಾಮ್ಸನ್​! Sanju Samson

Sanju Samson
Published on

Sanju Samson : ಏಷ್ಯಾ ಕಪ್ 2025 ರ ಭಾಗವಾಗಿ ಸೆಪ್ಟೆಂಬರ್ 19ರಂದು ಓಮನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 21 ರನ್‌ಗಳಿಂದ ಜಯಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 188 ರನ್‌ಗಳಿಗೆ ಸೀಮಿತವಾಯಿತು. ಸಂಜು ಸ್ಯಾಮ್ಸನ್ 56 ರನ್‌ಗಳೊಂದಿಗೆ ಅಗ್ರ ಸ್ಕೋರರ್ ಎನಿಸಿಕೊಂಡರು.

ಓಮಾನ್​ನಂತಹ ಸಣ್ಣ ತಂಡದ ವಿರುದ್ಧ ಭಾರತ ದೊಡ್ಡ ಸ್ಕೋರ್ ಗಳಿಸಬೇಕಿತ್ತು. ಒಮಾನ್ ಬೌಲರ್‌ಗಳನ್ನು ಕಡಿಮೆ ಅಂದಾಜು ಮಾಡಿದ್ದು, ನಿರ್ಲಕ್ಷ್ಯದ ಹೊಡೆತಗಳನ್ನು ಆಡಿದ್ದು ಮತ್ತು ಅತಿಯಾದ ಆತ್ಮವಿಶ್ವಾಸ ಭಾರತವನ್ನು ಸಾಧಾರಣ ಸ್ಕೋರ್‌ಗೆ ಸೀಮಿತಗೊಳಿಸಿತು. ನಂತರ, ಗುರಿ ಬೆನ್ನತ್ತಿದ ಓಮನ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳಿಗೆ ಭಯ ಹುಟ್ಟಿಸಿದರು. ಬ್ಯಾಟ್ಸ್‌ಮನ್‌ಗಳಾದ ಅಮೀರ್ ಕಲೀಮ್ (64) ಮತ್ತು ಹಮ್ಮದ್ ಮಿರ್ಜಾ (51) ಅನುಭವಿ ಭಾರತೀಯ ಬೌಲರ್‌ಗಳನ್ನು ಕಾಡಿದರು. ಸ್ವಲ್ಪ ಹೆಚ್ಚು, ಕಡಿಮೆ ಆಗಿದ್ದರೆ ಈ ಪಂದ್ಯದಲ್ಲಿ ಭಾರತ ಹೀನಾಯ ಸೋಲನ್ನು ಎದುರಿಸಬೇಕಾಗಿತ್ತು.

ಓಮನ್ ತಂಡವು ಗುರಿಯ ಸಮೀಪಕ್ಕೆ (167/4) ಬಂದು ಸೋಲುಂಡರು ಕೂಡ ಭಾರತೀಯ ಆಟಗಾರರಿಗೆ ಸೋಲುವ ಭಯ ತೋರಿಸಿತು. ಅಂತಿಮವಾಗಿ ಭಾರತ ತಂಡವು ಈ ಪಂದ್ಯದಲ್ಲಿ ಜಯಶಾಲಿಯಾಗಿ ಹೊರಹೊಮ್ಮಿತು ಮತ್ತು ಗ್ರೂಪ್​ ಹಂತದಲ್ಲಿ ಅಜೇಯ ತಂಡವಾಗಿ ಸೂಪರ್-4 ಅನ್ನು ಪ್ರವೇಶಿಸಿತು. ಭಾರತದ ಪರ ಅತಿ ಹೆಚ್ಚು ಸ್ಕೋರ್​ ಗಳಿಸಿದ ಆಟಗಾರನಾಗಿ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಈ ಪ್ರಶಸ್ತಿಯೊಂದಿಗೆ, ಸಂಜು ಒಂದು ಸಾಧನೆ ಮಾಡಿದ್ದಾರೆ. ಭಾರತಕ್ಕಾಗಿ ಟಿ20ಐಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸಂಜು 45 ಪಂದ್ಯಗಳ ಕಡಿಮೆ ವೃತ್ತಿಜೀವನದಲ್ಲಿ 3 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದರು. ಈ ಪಂದ್ಯದ ಮೊದಲು, ಸಂಜು ಈ ಪ್ರಶಸ್ತಿಯನ್ನು ದಿನೇಶ್ ಕಾರ್ತಿಕ್ (2) ಅವರೊಂದಿಗೆ ಹಂಚಿಕೊಂಡಿದ್ದರು.

ಭಾರತದ ದಂತಕಥೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅವರು 98 ಪಂದ್ಯಗಳ ವೃತ್ತಿಜೀವನದಲ್ಲಿ ಕೇವಲ ಒಮ್ಮೆ ಮಾತ್ರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಧೋನಿ ನಂತರ ಭಾರತಕ್ಕಾಗಿ ಅತಿ ಹೆಚ್ಚು ಟಿ20ಐಗಳನ್ನು ಆಡಿರುವ ರಿಷಭ್ ಪಂತ್, ತಮ್ಮ 76 ಪಂದ್ಯಗಳ ವೃತ್ತಿಜೀವನದಲ್ಲಿ ಕೇವಲ ಒಮ್ಮೆ ಮಾತ್ರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಒಟ್ಟಾರೆಯಾಗಿ, ದಿಗ್ಗಜ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಧೋನಿ ತಮ್ಮ 98 ಪಂದ್ಯಗಳ ವೃತ್ತಿಜೀವನದಲ್ಲಿ ಸಾಧಿಸಲು ಸಾಧ್ಯವಾಗದ್ದನ್ನು, ಸಂಜು ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಸಾಧಿಸಿದ್ದಾರೆ. ಒಟ್ಟಾರೆಯಾಗಿ, ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (12) ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಜೋಸ್ ಬಟ್ಲರ್ (10), ಮೊಹಮ್ಮದ್ ಶೆಹಜಾದ್ (9) ಮತ್ತು ಸಂಜು ಸ್ಯಾಮ್ಸನ್ (3) ಇದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net