ತಬ್ಬಿಕೊಳ್ಳುವಂತೆ ಕೇಳಿದ ಯುವಕನಿಗೆ ಕೊರಿಯಾ ಯುವತಿಯರು ಕೊಟ್ಟ ಪ್ರತಿಕ್ರಿಯೆ ವೈರಲ್​: ಜಾಲತಾಣದಲ್ಲಿ ಆಕ್ರೋಶ! Korean women

Korean women
Published on

Korean women : ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಆಗಮಿಸಿದ ಮಹಿಳಾ ಪ್ರವಾಸಿಗರೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಭಾರಿ ಟೀಕೆಗೆ ಗುರಿಯಾಗಿದ್ದಾನೆ. ದೆಹಲಿಯಲ್ಲಿರುವ ಇಂಡಿಯಾ ಗೇಟ್ ಮುಂದೆ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಯುವಕ ಇಬ್ಬರು ಕೊರಿಯಾ ಮಹಿಳೆಯರ ಬಳಿಗೆ ಹೋಗಿ ತನ್ನನ್ನು ಅಪ್ಪಿಕೊಳ್ಳುವಂತೆ ಕೇಳಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ಇದು ವೈರಲ್ ಆದ ನಂತರ, ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಯುವಕ ಮೊದಲು ಯುವತಿಯರನ್ನು ತನ್ನ ಮುಷ್ಟಿಗೆ ಗುದ್ದುವಂತೆ (ಫಿಸ್ಟ್​ ಬಂಪ್​) ಕೇಳುತ್ತಾನೆ. ಮೊದಲಿಗೆ, ಆತ ಏನು ಹೇಳುತ್ತಿದ್ದಾನೆ ಅನ್ನೋದು ಯುವತಿಗೆ ಅರ್ಥವಾಗುವುದಿಲ್ಲ. ನೀನು ನನ್ನನ್ನು ಹೊಡೆಯಬೇಕೆಂದು ಬಯಸಿದ್ದೀಯಾ? ಎಂದು ಕೇಳುತ್ತಾಳೆ. ಈ ವೇಳೆ ಪಕ್ಕದ್ದಲ್ಲಿ ಇನ್ನೊಬ್ಬ ಯುವಕ (ವಿಡಿಯೋದಲ್ಲಿ ಗೋಚರವಾಗುವುದಿಲ್ಲ) ಫಿಸ್ಟ್​ ಬಂಪ್​ ಎಂದು ಹೇಳಿದಾಗ, ಅದು ಅರ್ಥವಾಗಿ ಯುವತಿ, ಯುವಕನಿಗೆ ಫಿಸ್ಟ್​ ಬಂಪ್​ ನೀಡುತ್ತಾಳೆ.

ಆದರೆ, ಆ ಯುವಕ ಮತ್ತೆ ಯುವತಿಯರ ಬಳಿ ಮತ್ತೊಂದು ಆಸೆಯನ್ನು ವ್ಯಕ್ತಪಡಿಸುತ್ತಾನೆ. ಅವರನ್ನು ತಬ್ಬಿಕೊಳ್ಳುವಂತೆ ಕೇಳುತ್ತಾನೆ. ಇದನ್ನು ಕೇಳಿದ ಯುವತಿಯರು ಒಂದು ಕ್ಷಣ ಆಶ್ಚರ್ಯಚಕಿತರಾಗುತ್ತಾರೆ. ಫಿಸ್ಟ್​ ಬಂಪ್​ ಮಾಡಿದ್ದರಿಂದ ನಿನ್ನ ಕನಸು ನನಸಾಗಿದೆಯಲ್ಲ ಎಂದು ಓರ್ವ ಯುವತಿ ಹೇಳುತ್ತಾಳೆ. ಆದರೆ, ಕೊನೆಯಲ್ಲಿ, ಮತ್ತೊರ್ವ ಯುವತಿ ಆತನನ್ನು ತಬ್ಬಿಕೊಳ್ಳುತ್ತಾಳೆ. ನಂತರ ಆ ಯುವಕ "ನೀವು ಮುದ್ದಾಗಿದ್ದೀರಿ" ಮತ್ತು "ನಾನು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಹೇಳುತ್ತಾನೆ. ಅದಕ್ಕೆ ಆ ಯುವತಿ ಐ ಲವ್​ ಯು ಟೂ ಎಂದು ಹೇಳುತ್ತಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಯುವಕನನ್ನು ಟೀಕಿಸಿ ಹಲವು ಕಾಮೆಂಟ್‌ಗಳು ಬಂದಿವೆ. ಭಾರತೀಯರು ನಿಮ್ಮಲ್ಲಿ ಕ್ಷಮೆಯಾಚಿಸುತ್ತಾರೆ. ಇಂತಹ ಜನರಿಂದ ನೀವು ದೂರವಿರಿ ಎಂದು ಬಹುತೇಕರು ಕಾಮೆಂಟ್​ ಮಾಡಿದ್ದಾರೆ. ಅಲ್ಲದೆ, ಯುವಕನ ಕೃತ್ಯಗಳಿಂದ ಯುವತಿಯರು ಬೇಸರಗೊಂಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ, ವೈರಲ್​ ಆಗುತ್ತಿರುವ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net