ಆತನನ್ನು ಈಗಲೇ ಕೆಲಸದಿಂದ ಕಿತ್ತುಬಿಸಾಡಿ! ಸಂಜಯ್​ ಮಂಜ್ರೇಕರ್​ ವಿರುದ್ಧ ನೆಟ್ಟಿಗರು ಕೆಂಡಾಮಂಡಲ

sanjay manjrekar
Published on

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್​ ನಡುವೆ ನಡೆದ ಮಹಿಳಾ ಟಿ20 ವಿಶ್ವಕಪ್​ನ (T20 World Cup) ನಾಲ್ಕನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಮಹಿಳಾ ತಂಡ ಹೀನಾಯ ಸೋಲು ಅನುಭವಿಸಿದ್ದು, ಕ್ರೀಡಾಭಿಮಾನಿಗಳನ್ನು ತೀವ್ರ ಬೇಸರಕ್ಕೆ ದೂಡಿದೆ. ಒಂದೆಡೆ ತಮ್ಮ ನೆಚ್ಚಿನ ಟೀಮ್​ ಕಿವಿ ಪಡೆ ವಿರುದ್ಧ ಸೋತಿದ್ದಕ್ಕೆ ಬೇಸರಗೊಂಡಿದ್ದ ಫ್ಯಾನ್ಸ್​ಗಳಿಗೆ ಮೈದಾನದಲ್ಲಿ ಲೈವ್​ ವೇಳೆಯೇ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ (Sanjay Manjrekar)​ ಆಡಿದ ಮಾತುಗಳು ತೀವ್ರ ಅಸಮಾಧಾನ ಮೂಡಿಸಿದೆ.

ಅಷ್ಟಕ್ಕೂ ಸಂಜಯ್​ ಹೇಳಿದ್ದೇನು?

ಇಂದು ನಡೆದ ಭಾರತ ಮತ್ತು ನ್ಯೂಜಿಲೆಂಡ್ 2024ರ ಮಹಿಳಾ ಟಿ20 ವಿಶ್ವಕಪ್ ಪಂದ್ಯದ ಲೈವ್ ಕಾಮೆಂಟರಿ ವೇಳೆ ಸಂಜಯ್​ ಜನಾಂಗೀಯ ನಿಂದನೆ ಮಾಡಿದ್ದಾರೆ. ಈ ಮಾತುಗಳು ಲೈವ್​ನಲ್ಲಿ ರೆಕಾರ್ಡ್​ ಆಗಿದ್ದು, ನೆಟ್ಟಿಗರನ್ನು ತೀವ್ರ ಕೆರಳಿಸಿದೆ. ಪಂದ್ಯದ ನಡುವೆ ಮಹಿಳಾ ಆಟಗಾರರ​​ ಬಗ್ಗೆ ಮಾತನಾಡಿದ ಸಂಜಯ್ ಮಂಜ್ರೇಕರ್​, ಉತ್ತರ ಭಾರತೀಯ ಆಟಗಾರರ ಬಗ್ಗೆ ನನಗೆ ಅಷ್ಟು ಆಳವಾದ ಜ್ಞಾನವಿಲ್ಲ ಎಂದಿದ್ದಾರೆ. ಹಿರಿಯ ಕ್ರಿಕೆಟಿಗನ ನಾಲಿಗೆಯಿಂದ ಈ ಮಾತು ಹೊರಬಿದ್ದಿದ್ದೆ ತಡ ನೆಟ್ಟಿಗರು ಸಂಜಯ್​ರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಟೀಕಿಸಿದ್ದಾರೆ.

ಒಂದಷ್ಟು ನೆಟ್ಟಿಗರು ಈ ಕೂಡಲೇ ಸಂಜಯ್​ ಮಂಜ್ರೇಕರ್​ರನ್ನು ಕೆಲಸದಿಂದ ವಜಾಗಳಿಸಿ, ಅವರು ತಮ್ಮ ಸ್ಥಾನಕ್ಕೆ ಲಾಯಕ್ಕಿಲ್ಲ. ಲೈವ್​ನಲ್ಲಿ ಈ ರೀತಿಯ ಜನಾಂಗೀಯ ಕಮೆಂಟ್​ ಮಾಡುವುದು ಸರಿಯಲ್ಲ. ಆತನನ್ನು ಕರ್ತವ್ಯದಿಂದ ಕಿತ್ತುಬಿಸಾಡಿ ಎಂದು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್​ ಪಂದ್ಯದ ವಿವರ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್​ ತಂಡವು ನಾಯಕಿ ಸೋಫಿ ಡಿವೈನ್​ (57 ರನ್​, 36 ಎಸೆತ, 7 ಬೌಂಡರಿ) ಅರ್ಧಶತಕದ ಫಲವಾಗಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 160 ರನ್​ ಗಳಿಸಿತು. ಗುರಿ ಬೆನ್ನತ್ತಿದ್ದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಿವಿ ಪಡೆಯ​ ಬೌಲರ್​ಗಳು ಎದುರಾಳಿ ತಂಡವನ್ನು 102 ರನ್​ಗಳಿಗೆ ಕಟ್ಟಿ ಹಾಕುವ ಮೂಲಕ ಗೆಲುವಿನ ಪತಾಕೆ ಹಾರಿಸಿತು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net