ಶಿಷ್ಟಾಚಾರದ ಉಲ್ಲಂಘನೆ ಆರೋಪ, ಸಚಿವರ ಎದುರೇ ಸಂಸದ ಸುಧಾಕರ್ ಬೆಂಬಲಿಗರ ಆಕ್ರೋಶ

IMG20241005104121.jpg
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ಶಿಷ್ಟಾಚಾರದ ಉಲ್ಲಂಘನೆಯ ಆಕ್ರೋಶ ವ್ಯಕ್ತವಾಯಿತು‌.
ನಂದಿ ಗಿರಿಧಾಮದ ತಪ್ಪಲಿನಲ್ಲಿ ಗುರುತಿಸಲಾದ ಜಾಗದಲ್ಲಿ ಆರೋಗ್ಯ ಇಲಾಖೆಯು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಿದ್ದು ನೂತನ ಕಟ್ಟಡವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್ ಸಾಥ್ ನೀಡಿದರು. ಇದೇ ವೇಳೆ ಸರ್ಕಾರಿ ಶಿಷ್ಟಾಚಾರದ ಉಲ್ಲಂಘನೆಯ ಆಕ್ರೋಶ ವ್ಯಕ್ತವಾಯಿತು.

*ಇದೊಂದು ಗಲೀಜು ಕಾರ್ಯಕ್ರಮ*
ಕಾರ್ಯಕ್ರಮಕ್ಕೆ ಸಂಸದ ಡಾ ಕೆ.ಸುಧಾಕರ್ ಅನ್ನು ಆಹ್ವಾನಿಸಿಲ್ಲ. ಅನುದಾನ ಮಂಜೂರಾತಿ, ಅಭಿವೃದ್ಧಿ ಕೆಲಸ ಕೈಗೊಳ್ಳುವುದಕ್ಕೆ ಸಂಸದರು ಬೇಕು. ಉದ್ಘಾಟನೆ ಕಾರ್ಯಕ್ರಮಕ್ಕೆ ಬೇಡವೇ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್ ಮಾತನಾಡಿ, ಸ್ಥಳೀಯ ಸಂಸದರು, ಗ್ರಾ.ಪಂ ಸೇರಿದಂತೆ ಜನಪ್ರತಿನಿಧಿಗಳನ್ನು ಶಿಷ್ಟಾಚಾರದಂತೆ ಆಹ್ವಾನಿಸಿಲ್ಲ. ನೇರವಾಗಿ ಬಂದು ನೇರವಾಗಿ ಕಾರ್ಯಕ್ರಮದಿಂದ ಹೋಗುವ ಕಾಟಾಚಾರ ಧೋರಣೆಯನ್ನು ತೋರಲಾಗಿದೆ ಎಂದು ಕಿಡಿಕಾರಿದರು.
ಗ್ರಾ.ಪಂ.ಅಧ್ಯಕ್ಷೆ ಮಾಲಿನಿ ಶ್ರೀನಿವಾಸ್ ಮಾತನಾಡಿ, ನಮ್ಮ ಗ್ರಾ.ಪಂ.ವ್ಯಾಪ್ತಿಯ ಆರೋಗ್ಯ ಕೇಂದ್ರ ಉದ್ಘಾಟನೆಗೆ ನಮ್ಮನ್ನೇ ಕಡೆಗಣಿಸಲಾಗಿದೆ. ಸಂಜೆ ಬಂದು ಆಹ್ವಾನ ಪತ್ರಿಕೆ ಕೊಟ್ಟು, ಬಂದರೆ ಬನ್ನಿ, ಬಿಟ್ಟರೆ ಬಿಡಿ ಎನ್ನುವ ಧೋರಣೆಯಲ್ಲ. ಕಟ್ಟಡ ನಿರ್ಮಾಣಕ್ಕೆ ಜಾಗ ಕೊಟ್ಟ ದಾನಿ ಕುಟುಂಬದವರನ್ನೂ ಸ್ಮರಿಸದೇ ಅಗೌರವ ತೋರಲಾಗಿದೆ ಎಂದು ಆರೋಪಿಸಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಮುನಿಸ್ವಾಮಿ ಮಾತನಾಡಿ, ಇದೊಂದು ಗಲೀಜು ಕಾರ್ಯಕ್ರಮ, ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದು ಅಭಿವೃದ್ಧಿ ಕೆಲಸದಲ್ಲೂ ರಾಜಕೀಯ ಮಾಡಬಾರದು ಎಂದು ಕಿಡಿಕಾರಿದರು.

*ಸಮಾಧಾನಪಡಿಸಲು ಮುಂದಾದ ಎಸ್ಪಿ*
ಗ್ರಾಮದಲ್ಲಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ನೆರವೇರುತ್ತಿದೆ. ನಿಮ್ಮ ನೋವನ್ನು ಹೇಳಿಕೊಳ್ಳಬಹುದು. ಆದರೆ, ಗಲಾಟೆ ಮಾಡಬಾರದು, ಗಡುಸು ಧ್ವನಿಯಲ್ಲಿ ಮಾತನಾಡುವುದು ಬೇಡ ಎಂದು ಸಲಹೆ ನೀಡಿದರು. ಇದರಿಂದ ಅಸಮಾಧಾನಿತರು ಕೂಲ್ ಆದರು. ಆದರೂ ಆಕ್ರೋಶದಲ್ಲಿ ಹೊರ ನಡೆದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net