ಹೊಸ ವರ್ಷದ ಆರಂಭದಲ್ಲೇ ಹೊಸ ಪಯಣ ಶುರು ಮಾಡಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ! Sania Mirza

Sania Mirza
Published on

Sania Mirza : ಮಕ್ಕಳ ಫಿಟ್‌ನೆಸ್ ಮತ್ತು ಉತ್ತಮ ಶಿಕ್ಷಣಕ್ಕಾಗಿ ಒಂದು ವರ್ಷದ ಹಿಂದೆಯೇ ಹೈದರಬಾದ್​ನ ಜುಬಿಲಿ ಹಿಲ್ಸ್‌ನಲ್ಲಿ 'ಸೀಸಾ ಸ್ಪೇಸ್ಸ್' ಸ್ಥಾಪಿಸಲಾಗಿದೆ. ಇದೀಗ ಭಾರತದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಈ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದಾರೆ. ಹೊಸ ವರ್ಷದಲ್ಲಿ ಸೀಸಾ ಸ್ಪೇಸ್‌ನೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಸಾನಿಯಾ ಹೇಳಿದ್ದಾರೆ.

ಹೈದರಾಬಾದ್​ನ ಜುಬಿಲಿ ಹಿಲ್ಸ್ ರಸ್ತೆಯಲ್ಲಿರುವ ಸೀಸಾ ಸ್ಪೇಸ್ ಸೆಂಟರ್​ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನಿಯಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಕೊನಿದೆಲಾ ಹಾಗೂ ಸೀಸಾ ಸ್ಪೇಸ್ ಪಾಲುದಾರರಾದ ಸ್ವಾತಿ ಗುಣುಪತಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾನಿಯಾ ಮಿರ್ಜಾ, ಸದ್ಯ ಎಲ್ಲ ಮಕ್ಕಳು ಫೋನ್, ಟ್ಯಾಬ್ ಮತ್ತು ಟಿವಿಗಳಿಗೆ ಅಂಟಿಕೊಂಡಿದ್ದಾರೆ. ಏನೇ ಮಾಡಬೇಕಾದರೂ ಫೋನ್ ಅಥವಾ ಟಿವಿ ಮಕ್ಕಳಿಗೆ ಅನಿವಾರ್ಯವಾಗಿಬಿಟ್ಟಿದೆ. ಓರ್ವ ತಾಯಿಯಾಗಿ ನನಗೂ ಈ ಸಮಸ್ಯೆಯ ಬಗ್ಗೆ ತಿಳಿದಿದೆ. ಹೀಗಾಗಿ ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಿನ ಅಗತ್ಯತೆ ಇದೆ. ಉತ್ತಮ ಪರಿಸರ, ಫಿಟ್ನೆಸ್ ಮತ್ತು ಆಹಾರ ಬಹಳ ಮುಖ್ಯವಾಗಿದೆ. ಈ ವಿಷಯಗಳಲ್ಲಿ ನಾನು ಸೀಸಾ ಸ್ಪೇಸ್​ನೊಂದಿಗೆ ಕೆಲಸ ಮಾಡುತ್ತೇನೆ ಎಂದು ಸಾನಿಯಾ ಮಿರ್ಜಾ ಹೇಳಿದರು.

ಅಂದಹಾಗೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್​ ಅವರನ್ನು ವರಿಸಿದ್ದರು. ಆದರೆ, ಮಲಿಕ್ ಅವರು​ ಕಳೆದ ವರ್ಷ ವಿಚ್ಛೇದನ ಘೋಷಣೆ ಮಾಡಿದರು. ಸಾನಿಯಾರನ್ನು ಬಿಟ್ಟು ಪಾಕ್​ನ ಕಿರುತೆರೆ ನಟಿ ಸನಾ ಜಾವೇದ್​ ಅವರೊಂದಿಗೆ‘ ಮಲಿಕ್ ಎರಡನೇ ಮದುವೆಯಾಗಿದ್ದಾರೆ. ಈ ಮೂಲಕ ಸಾನಿಯಾ ಮಿರ್ಜಾ ಜತೆಗಿನ 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ.

2010ರಲ್ಲಿ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದ ಶೋಯಿಬ್​ ಮಲಿಕ್​ ದಂಪತಿಗೆ 2018ರಲ್ಲಿ ಗಂಡು ಜನಿಸಿತ್ತು. 2022ರಿಂದಲೂ ಇವರಿಬ್ಬರೂ ಪ್ರತ್ಯೇಕವಾಗಿ ದುಬೈನಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇವರಿಬ್ಬರ ನಡುವೆ ವಿಚ್ಛೇದನ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಯಾವಾಗ ಮಲಿಕ್​, ಸನಾ ಜತೆಗಿನ ಫೋಟೋಗಳನ್ನು ಹಂಚಿಕೊಂಡರೋ ಆಗ ಡಿವೋರ್ಸ್​ ಖಚಿತವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net