

HMPV : ವಿಶ್ವದಾದ್ಯಂತ ಸುಮಾರು 7 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡು ಕೋವಿಡ್ -19 ಸಾಂಕ್ರಾಮಿಕದ ಐದು ವರ್ಷಗಳ ಬಳಿಕ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ಕರೊನಾ ಕೂಡ ಚೀನಾದಲ್ಲೇ ಹುಟ್ಟಿದ್ದು ಅನ್ನೋದನ್ನ ಮರೆಯುವಂತಿಲ್ಲ. ಸದ್ಯ ಚೀನಾದಲ್ಲಿ ಜೀವ ತೆಳೆದಿರುವ ವೈರಸ್ ಹೆಸರು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂದು ಕರೆಯಲಾಗಿದೆ. ಈ ವೈರಸ್ ಜ್ವರದಂತ ಸಾಮಾನ್ಯ ರೋಗಲಕ್ಷಣಗಳೊಂದಿಗೆ ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದು ಕೋವಿಡ್ -19 ನಂತರ ವಿಶ್ವದಾದ್ಯಂತ ಮತ್ತೊಂದು ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಚೀನಾದಲ್ಲಿ ಈ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಹಲವಾರು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣ ಪೋಸ್ಟ್ಗಳು ಸೂಚಿಸುತ್ತವೆ. ಆಸ್ಪತ್ರೆಗಳು, ಸ್ಮಶಾನಗಳು ತುಂಬಿ ತುಳುಕುತ್ತಿವೆ ಎಂದೂ ಕೆಲವರು ಹೇಳುತ್ತಿದ್ದಾರೆ. ವೈರಸ್ನಿಂದಾಗಿ ಪ್ರತಿದಿನ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂಬ ವರದಿಗಳಿವೆ. ಚೀನಾದಲ್ಲಿ ಕಾಣಿಸಿಕೊಂಡಿರುವ ಈ ವೈರಾಣು ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಐದು ವರ್ಷಗಳ ಹಿಂದೆ ಜಗತ್ತನ್ನೇ ಕಾಡಿದ ಕೋವಿಡ್ -19 ರೀತಿ ಈ HMPV ವೈರಸ್ ಚೀನಾ ಸೇರಿದಂತೆ ಪ್ರಪಂಚದಾದ್ಯಂತ ವಿನಾಶವನ್ನು ಉಂಟುಮಾಡಲಿದೆ ಎನ್ನಲಾಗುತ್ತಿದೆ.
ಆದರೆ, ಆರೋಗ್ಯ ತಜ್ಞರ ಪ್ರಕಾರ ಈ ವೈರಸ್ ಅಷ್ಟೊಂದು ಪ್ರಭಾವಶಾಲಿ ಎನ್ನುತ್ತಿದ್ದಾರೆ. ಹೀಗಾಗಿ ಕೊಂಚ ನಿಟ್ಟುಸಿರು ಬಿಡುಬಹುದಾಗಿದೆ. ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳು ಎಚ್ಎಂಪಿವಿ ವೈರಸ್ ಹರಡುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಆಘಾತಕಾರಿ ವಿಚಾರ ಏನೆಂದರೆ, ಭಾರತಕ್ಕೆ ಈಗಾಗಲೇ ಈ ವೈರಸ್ ಕಾಲಿಟ್ಟಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಹೀಗಾಗಿ ಭಾರತ ಅಲರ್ಟ್ ಆಗಿದೆ. ಅಷ್ಟಕ್ಕೂ ಈ ವೈರಸ್ ನಿಜವಾಗಿಯೂ ಅಪಾಯಕಾರಿಯೇ? ಚಿಂತಿಸುವ ಅವಶ್ಯಕತೆ ಇದೆಯೇ? ಈ ವೈರಸ್ ಕೋವಿಡ್-19 ವೈರಸ್ ಅನ್ನು ಹೋಲುತ್ತದೆಯೇ? ಅದರ ಲಕ್ಷಣಗಳೇನು? ಇಲ್ಲಿಯವರೆಗೆ ಆರೋಗ್ಯ ತಜ್ಞರು ಏನು ಹೇಳಿದ್ದಾರೆ? HMPVಗೆ ಲಸಿಕೆ ಇದೆಯೇ? ಈ ಬಗ್ಗೆ ನಾವೀಗ ಆಳವಾಗಿ ತಿಳಿದುಕೊಳ್ಳೋಣ.
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಒಂದು ಸಾಮಾನ್ಯ ಉಸಿರಾಟದ ವೈರಸ್. ಇದು ಕೆಳ ಅಥವಾ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳಿಗೆ ಕಾರಣವಾಗಬಹುದು. ಅಲ್ಲದೆ, ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ನಂತೆಯೇ ಜ್ವರವು ಇದರ ಸಾಮಾನ್ಯ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ಚಳಿಗಾಲದಲ್ಲಿ ಅಥವಾ ವಸಂತಕಾಲದ ಆರಂಭದಲ್ಲಿ ಸಂಭವಿಸುತ್ತದೆ.
ಅಂದಹಾಗೆ ಈ HMPV ಹೊಸದಾಗಿ ಕಂಡುಹಿಡಿದ ವೈರಸ್ ಅಲ್ಲ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ ಇದನ್ನು 2001ರಲ್ಲಿ ಮೊದಲು ಕಂಡುಹಿಡಿಯಲಾಯಿತು. ಆದಾಗ್ಯೂ, ಸೆರೋಲಾಜಿಕ್ ಪುರಾವೆಗಳ ಪ್ರಕಾರ ಈ ವೈರಸ್ 1958 ರಿಂದಲೂ ಮಾನವರಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಲಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಈ ಎಚ್ಎಂಪಿವಿ ನ್ಯುಮೊವಿರಿಡೆ ಕುಟುಂಬಕ್ಕೆ ಸೇರಿದ್ದು, ಇದು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಸಹ ಒಳಗೊಂಡಿದೆ.
ಹೌದು, ಕರೊನಾವೈರಸ್ ಅಥವಾ COVID-19 (SARS-CoV-2) ವೈರಸ್ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಸದ್ಯದ HMPV ವೈರಸ್ ಮತ್ತು ಕರೊನಾ ವೈರಸ್ ಕೆಲವು ರೀತಿಯಲ್ಲಿ ಹೋಲುತ್ತವೆ. ಎರಡೂ ವೈರಸ್ಗಳು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗೆ ಕಾರಣವಾಗುತ್ತವೆ. ಚಿಕ್ಕ ಮಕ್ಕಳು, ವೃದ್ಧರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ಅವು ಹೆಚ್ಚು ತೀವ್ರವಾಗಿರುತ್ತವೆ.
ಎರಡೂ ವೈರಸ್ಗಳ ಲಕ್ಷಣಗಳು ಕೂಡ ಹೋಲಿಕೆಯಾಗುತ್ತವೆ. HMPVಗೆ ಸಂಬಂಧಿಸಿದ ಸಾಮಾನ್ಯ ಲಕ್ಷಣಗಳೆಂದರೆ, ಕೆಮ್ಮು, ಜ್ವರ, ಮೂಗು ಕಟ್ಟುವುದು ಮತ್ತು ಉಸಿರಾಟದ ತೊಂದರೆ. ಈ ಲಕ್ಷಣಗಳು COVID-19 ವೈರಸ್ ಸೋಂಕಿತ ಜನರಲ್ಲೂ ಕಂಡುಬಂದಿತ್ತು. COVID ಮತ್ತು HMPV ಎರಡೂ ಪ್ರಾಥಮಿಕವಾಗಿ ಸೋಂಕಿತ ವ್ಯಕ್ತಿಯಿಂದ ಇತರರಿಗೆ ಕೆಮ್ಮುವಿಕೆ ಮತ್ತು ಸೀನುವಿಕೆಯ ಹನಿಗಳ ಮೂಲಕ ಹರಡುತ್ತದೆ. ವೈರಸ್ ಇರುವ ವಸ್ತುಗಳು ಅಥವಾ ಮೇಲ್ಮೈಗಳನ್ನು ಸ್ಪರ್ಶಿಸಿದ ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸಿದಾಗ ಈ ವೈರಸ್ ಹರಡಬಹುದು.
ಸೈನ್ಸ್ ಡೈರೆಕ್ಟ್ ಪ್ರಕಾರ, ಕೋವಿಡ್-19 ತಾಪಮಾನ ಸೂಕ್ಷ್ಮವಾಗಿ ಕಂಡುಬರುತ್ತದೆ. ಆದ್ದರಿಂದ, ಇದು ಋತುಮಾನ ಕಾಯಿಲೆಯಾಗಿದೆ. ಅದೇ ರೀತಿ, ವಿವಿಧ ಋತುಗಳಲ್ಲಿ HMPV ಹರಡುತ್ತದೆ ಎಂದು ಯುಎಸ್ ಸಿಡಿಸಿ ಹೇಳಿದೆ. HMPV ವರ್ಷಪೂರ್ತಿ ಪತ್ತೆಹಚ್ಚಬಹುದಾದರೂ, ಯುನೈಟೆಡ್ ಸ್ಟೇಟ್ಸ್ನಲ್ಲಿ ಸೋಂಕುಗಳು ಸಾಮಾನ್ಯವಾಗಿ ಚಳಿಗಾಲದ ಅಂತ್ಯದಿಂದ ವಸಂತಕಾಲದ ಆರಂಭದವರೆಗೆ ಹೆಚ್ಚು ಪ್ರಚಲಿತವಾಗಿದೆ.
ಸದ್ಯಕ್ಕೆ ಯಾವುದೇ ಲಸಿಕೆ ಇಲ್ಲ. ಆ್ಯಂಟಿವೈರಲ್ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಆದಾಗ್ಯೂ, ರೋಗಿಗಳು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ HMPV ಮತ್ತು ಇತರ ಉಸಿರಾಟದ ವೈರಸ್ಗಳ ಹರಡುವಿಕೆಯನ್ನು ತಡೆಯಬಹುದು.
* ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆಯಿರಿ.
* ತೊಳೆಯದ ಕೈಗಳಿಂದ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಿ.
* ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ.
* ಶೀತದ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು.
* ಇತರರೊಂದಿಗೆ ಏನಾದರೂ ಹಂಚಿಕೊಂಡು ತಿನ್ನುವುದನ್ನು ತಪ್ಪಿಸಿ.
* ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಿ.
ಚೀನಾದಲ್ಲಿ ಎಚ್ಎಂಪಿವಿ ಹರಡುತ್ತಿರುವ ಆತಂಕದ ನಡುವೆ, ಭಾರತದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್ ಗೋಯೆಲ್, ಈ ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದಾರೆ. ದೇಶದಲ್ಲಿ ಉಸಿರಾಟದ ಸೋಂಕುಗಳಿಗೆ ಸಂಬಂಧಿಸಿದ ಡೇಟಾವನ್ನು ಅವರು ವಿಶ್ಲೇಷಿಸಿದ್ದು, 2024ರ ಡೇಟಾದಲ್ಲಿ ಉಸಿರಾಟದ ಸಮಸ್ಯೆಯಲ್ಲಿ ಅಂತಹ ಗಮನಾರ್ಹ ಏರಿಕೆ ಕಂಡಿಲ್ಲ ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಸಾಮಾನ್ಯವಾಗಿ ಹರಡುತ್ತವೆ ಎಂದು ಹೇಳಿದ್ದಾರೆ.
ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಾನು ಜನರನ್ನು ವಿನಂತಿಸುತ್ತೇನೆ. ಅಂದರೆ, ಕೆಮ್ಮು ಮತ್ತು ಶೀತ ಇರುವವರು ವೈರಸ್ ಹರಡುವುದನ್ನು ತಡೆಯಲು ಇತರ ಜನರೊಂದಿಗೆ ಸಂಪರ್ಕವನ್ನು ತಪ್ಪಿಸಬೇಕು. ಶೀತ ಮತ್ತು ಜ್ವರಕ್ಕೆ ಸೂಚಿಸಿದ ಸಾಮಾನ್ಯ ಔಷಧಿಗಳನ್ನು ತೆಗೆದುಕೊಳ್ಳಬೇಕು. ಸದ್ಯದ ಪರಿಸ್ಥಿತಿಯಿಂದ ಜನರು ಚಿಂತಾಕ್ರಾಂತರಾಗಿದ್ದಾರೆ ಎಂದು ಡಾ.ಗೋಯೆಲ್ ಹೇಳಿದ್ದಾರೆ.
ಲಭ್ಯವಿರುವ ಎಲ್ಲ ಚಾನೆಲ್ಗಳ ಮೂಲಕ ಚೀನಾದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವೈರಸ್ ಪರಿಸ್ಥಿತಿಯ ಬಗ್ಗೆ ಸಮಯೋಚಿತ ಕ್ರಮ ಕೈಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಭಾರತ ವಿನಂತಿಸಿದೆ. (ಏಜೆನ್ಸೀಸ್)