ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್​ ಪಂತ್​ಗೆ 1.63 ಕೋಟಿ ರೂ. ಟೋಪಿ ಹಾಕಿದ ಹರಿಯಾಣ ಕ್ರಿಕೆಟಿಗ!

rishab panth
ರಿಷಭ್​ ಪಂತ್​, ಮೃಣಾಕ್​ ಸಿಂಗ್
Published on

ನವದೆಹಲಿ : ಭಾರತದ ವಿಕೆಟ್‌ಕೀಪರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್​ಗೆ ಹರಿಯಾಣದ ಮಾಜಿ ಕ್ರಿಕೆಟಿಗ ಮೃಣಾಕ್ ಸಿಂಗ್, 1.63 ಕೋಟಿಗೂ ಅಧಿಕ ಹಣವನ್ನು ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮೃಣಾಕ್ ಸಿಂಗ್ 1 ಕೋಟಿ 63 ಲಕ್ಷ ಚೆಕ್ ಬೌನ್ಸ್ ಮಾಡುವ ಮೂಲಕ ರಿಷಭ್ ಪಂತ್​ಗೆ ವಂಚಿಸಿದ್ದಾರೆ ಎನ್ನಲಾಗಿದೆ. ಮೃಣಾಕ್ ಸಿಂಗ್ ವಿರುದ್ಧ ಇರುವ ಬೇರೊಂದು ಆರೋಪದ ವಿಚಾರಣೆ ವೇಳೆ ಈ ಅಂಶವೀಗ ಬೆಳಕಿಗೆ ಬಂದಿದೆ. ಈ ಕುರಿತಂತೆ ರಿಷಭ್​ ಅವರು ಮ್ಯಾನೇಜರ್ ಪುನೀತ್ ಸೋಲಂಕಿ ದೂರು ಕೂಡ ದಾಖಲು ಮಾಡಿದ್ದರು ಎಂಬ ಅಂಶ ತಿಳಿದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮೃಣಾಕ್ ಸಿಂಗ್ 1 ಕೋಟಿ 63 ಲಕ್ಷ ಚೆಕ್ ಬೌನ್ಸ್ ಮಾಡುವ ಮೂಲಕ ರಿಷಭ್​ ಅವರಿಗೆ ವಂಚಿಸಿದ್ದಾರೆ ಎಂದು ಮ್ಯಾನೇಜರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ಹೇಗೆ ಬೆಳಕಿಗೆ ಬಂತು?

ಮೃಣಾಕ್ ಉದ್ಯಮಿಯೊಬ್ಬರಿಗೆ ಮೋಸ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಗ್ಗದ ದರದಲ್ಲಿ ದುಬಾರಿ ವಾಚ್ ಮತ್ತು ಮೊಬೈಲ್ ಫೋನ್​ಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿರುವ ಆರೋಪವಿದೆ. ಆರು ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಅವರ ವಿರುದ್ಧ ಮುಂಬೈನ ಜುಹು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದರ ವಿಚಾರಣೆ ವೇಳೆ ರಿಷಭ್​ ಅವರಿಗೆ ಆಗಿರುವ ವಂಚನೆ ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಮೃಣಾಕ್​ ಸಿಂಗ್​ ತಾನು, ಐಷಾರಾಮಿ ವಾಚ್‌ಗಳು, ಬ್ಯಾಗ್‌ಗಳು, ಆಭರಣಗಳು ಇತ್ಯಾದಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ರಿಷಭ್​ ಅವರು ಫ್ರಾಂಕ್ ಮುಲ್ಲರ್ ವ್ಯಾನ್‌ಗಾರ್ಡ್ ಯಾಟಿಂಗ್ ಸಿರೀಸ್‌ನಿಂದ ವಾಚ್ ಖರೀದಿಸಲು ಇಚ್ಛೆ ಪಟ್ಟಿದ್ದರು. ಅದನ್ನು ತಾನು ಕೊಡಿಸುವುದಾಗಿ ಮೃಣಾಕ್ ಸಿಂಗ್ ಹೇಳಿ, ರಿಷಭ್​ ಅವರಿಂದ 36,25,120 ರೂ. ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ಇನ್ನೊಂದು ವಾಚ್​ಗಾಗಿ 62,60,000 ರೂ. ಪಡೆದುಕೊಂಡಿದ್ದರು. ಈ ರೀತಿಯಾಗಿ ರಿಷಭ್​ ಅವರ ಜತೆಗೆ ತಮಗೂ ವಂಚಿಸಿದ್ದಾರೆ ಎಂದು ಸೋಲಂಕಿ ದೂರಿನಲ್ಲಿ ದಾಖಲು ಮಾಡಿರುವುದು ಬಹಿರಂಗಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net