ಗಂಡನ ಉಪಜಾತಿ ಬೇರೆ ಎಂದು ಗಂಡನ ಬಿಟ್ಟು ತವರು ಸೇರಿದಾಕೆಗೆ ಹೈಕೋರ್ಟ್​ನಿಂದ ಬಿತ್ತು ಭಾರಿ ದಂಡ!

wife
Published on

ಗಾಂಧಿನಗರ (ಗುಜರಾತ್​): ಮದುವೆಯಾದ ಬಳಿಕ ಗಂಡನ ಉಪಜಾತಿ ಬೇರೆ ಎನ್ನುವುದು ತಿಳಿದ ಮಹಿಳೆಯೊಬ್ಬಳು ಮದುವೆಯಾದ ನಾಲ್ಕೇ ದಿನಕ್ಕೆ ತವರಿಗೆ ಹೋಗಿ ನಾಲ್ಕು ವರ್ಷವಾದರೂ ಮರಳಿ ಬರಲಿಲ್ಲ. ಈಕೆಯ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗುಜರಾತ್​ ಹೈಕೋರ್ಟ್​ ಪತ್ನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದನ್ನು ಪತಿಗೆ ನೀಡುವಂತೆ ಆದೇಶಿಸಿದೆ.

ಆಗಿದ್ದೇನೆಂದರೆ, ಪಟೇಲ್​ ಸಮುದಾಯಕ್ಕೆ ಸೇರಿದ್ದ ಯುವತಿಗೆ ಅದೇ ಸಮುದಾಯಕ್ಕೆ ಸೇರಿದ್ದ ಆದರೆ ಉಪಜಾತಿ ಬೇರೆಯಾಗಿದ್ದ ಯುವಕನ ಜತೆ ಮದುವೆಯಾಗಿತ್ತು. ನಾಲ್ಕು ದಿನ ಆಗುವಷ್ಟರಲ್ಲಿಯೇ ಗಂಡನ ಉಪಜಾತಿ ಬೇರೆ ಎನ್ನುವ ಕಾರಣಕ್ಕೆ ಯುವತಿ ತವರು ಮನೆ ಸೇರಿದ್ದಳು. ಆಕೆಯ ತವರಿನವರೂ ಈಕೆಗೆ ಸಪೋರ್ಟ್​ ಮಾಡಿದ್ದರು.

ತನ್ನ ಪತ್ನಿಯನ್ನು ಅಕ್ರಮವಾಗಿ ಕರೆದುಕೊಂಡು ಹೋಗಿದ್ದು, ತನಗೆ ಆಕೆಯನ್ನು ನೋಡಲು ಬಿಡುತ್ತಿಲ್ಲ ಎಂದು ಪತಿ ಗುಜರಾತ್​ ಹೈಕೋರ್ಟ್​ ಮೊರೆ ಹೋಗಿದ್ದ. ಮಹಿಳೆಯನ್ನು ವಿಚಾರಿಸಲು ಕೋರ್ಟ್​ ಆಕೆಯ ಹಾಜರಿಗೆ ಆದೇಶಿಸಿತ್ತು. ವಿಚಾರಣೆ ವೇಳೆ ನಾಲ್ಕು ದಿನ ಮಾತ್ರ ಒಟ್ಟಿಗೆ ಇದ್ದದ್ದು ಕೋರ್ಟ್​ಗೆ ತಿಳಿಯಿತು.

ಈ ಬಗ್ಗೆ ಪತ್ನಿಯನ್ನು ವಿಚಾರಿಸಿದಾಗ ನಾವು ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದು, ತನ್ನ ಪತಿಯ ಉಪಜಾತಿ ಭಿನ್ನವಾಗಿದೆ ಆದ್ದರಿಂದ, ಈ ಮದುವೆ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟಿನಲ್ಲಿ ಹೇಳಿದಳು. ಕೋರ್ಟ್​ ಆಕೆಯ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಇದರಿಂದ ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದರು. ಯುವಕರ ಬದುಕು ಜಾತಿ ವಿಚಾರವಾಗಿ ಹಾಳಾಗಿರುವುದು ದುರದೃಷ್ಟಕರ. ಈ ಪ್ರಕರಣದಲ್ಲಿ ಜಾತಿ ಕುರಿತು ಬಿಟ್ಟರೆ ಗಂಡನ ಬಗ್ಗೆ ಯಾವ ಆರೋಪಗಳೂ ಇಲ್ಲ. ಜಾತಿ ಪದ್ಧತಿಯಿಂದ ಈ ರೀತಿ ಕೆಟ್ಟದಾಗಿ ವರ್ತಿಸುವುದನ್ನು ನಾವು ಸಹಿಸುವುದಿಲ್ಲ ಎಂದ ಕೋರ್ಟ್​, ಕೋರ್ಟ್​ ವೆಚ್ಚದ ರೂಪದಲ್ಲಿ 10 ಸಾವಿರ ರೂಪಾಯಿ ಗಂಡನಿಗೆ ನೀಡುವಂತೆ ಆದೇಶಿಸಿದೆ.

ಈ ಧೋರಣೆಯಿಂದ ಯುವಕರ ಜೀವನ ಹಾಳಾಗಿದೆ. ನಮ್ಮ ಹಿರಿಯರು ನಮಗೆ ಮಾರ್ಗದರ್ಶನ ನೀಡಬೇಕು. ಆದರೆ ಇಲ್ಲಿ ಇದಕ್ಕೆ ವಿರುದ್ಧವಾಗಿ ಕುಟುಂಬದವರು ಪಾತ್ರವಹಿಸಿದ್ದಾರೆ ಎಂದು ಕೋರ್ಟ್ ಹೇಳಿದ್ದು, ಇಬ್ಬರೂ ಒಟ್ಟಾಗಿ ಬಾಳುವಂತೆ ಬುದ್ಧಿಮಾತು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net