ಆಂಗ್ಲರ ವಿರುದ್ಧ ಆಲ್ರೌಂಡ್​ ಪ್ರದರ್ಶನ; ಹಾಲಿ ಚಾಂಪಿಯನ್ನರ ಎದುರು ಗೆದ್ದು ಬೀಗಿದ ಆಸ್ಟ್ರೇಲಿಯಾ

Australia
Published on

ಬಾರ್ಬೋಡಾಸ್​: ಇಲ್ಲಿನ ಕೆನ್ಸಿಂಗ್ಟನ್​ ಒವಲ್​ ಬ್ರಿಡ್ಜ್​ಸ್ಟೋನ್​ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ 17ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತನ್ನ ಸೂಪರ್​-8 ಹಾದಿಯನ್ನು ಸುಗಮವಾಗಿಸಿಕೊಂಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಟ್ರಾವಿಸ್​ ಹೆಡ್​ (34 ರನ್​, 18 ಎಸೆತ, 2 ಬೌಂಡರಿ, 3 ಸಿಕ್ಸರ್), ಡೇವಿಡ್​ ವಾರ್ನರ್​ (39 ರನ್, 16 ಎಸೆತ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಆರಂಭ ಒದಗಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಬಂದ ನಾಯಕ ಮಿಚೆಲ್ ಮಾರ್ಷ್ 35 ರನ್​ಗಳ ಕೊಡುಗೆ ನೀಡಿದರೆ, ಗ್ಲೆನ್ ಮ್ಯಾಕ್ಸ್​ವೆಲ್ 28 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯಿನಿಸ್ 17 ಎಸೆತಗಳಲ್ಲಿ 30 ರನ್ ಸಿಡಿಸಿ ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 201 ರನ್​ ಗಳಿಸಿತ್ತು.

ಕಠಿಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡಕ್ಕೆ ಆರಂಭಿಕರಾದ ಫಿಲ್​ ಸಾಲ್ಟ್​ (37 ರನ್, 23 ಎಸೆತ, 4 ಬೌಂಡರಿ, 2 ಸಿಕ್ಸರ್), ಜೋಸ್​ ಬಟ್ಲರ್​ (42 ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಆರಂಭ ಒದಗಿಸಿದರಾದರೂ ಆಸ್ಟ್ರೇಲಿಯಾ ಬೌಲರ್​ಗಳು ಇವರನ್ನು ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ. ಆರಂಭಿಕರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್ ತಂಡ ರನ್​ ವೇಗಕ್ಕೆ ಆಸ್ಟ್ರೇಲಿಯಾ ವೇಗಿಗಳು ಬ್ರೇಕ್​ ಹಾಕಿದ ಪರಿಣಾಮ ಅಂತಿಮ ಆಂಗ್ಲರು 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 165 ರನ್​ ಗಳಿಸಿ 35 ರನ್​ಗಳ ಸೋಲಪ್ಪಿಕೊಂಡಿತ್ತು.

ಆಸ್ಟ್ರೇಲಿಯಾ ಪರ ಪ್ಯಾಟ್​ ಕಮ್ಮಿನ್ಸ್​ (4-0-23-2), ಆ್ಯಡಂ ಜಂಪಾ (4-0-28-2), ಜೋಶ್​ ಹೇಜಲ್​ವುಡ್​ (4-0-28-1), ಮಾರ್ಕಸ್​ ಸ್ಟೋಯಿನಿಸ್ (-3-0-24-1), ಮಿಚೆಲ್​ ಸ್ಟಾರ್ಕ್​ (3-0-37-0), ಗ್ಲೆನ್​ ಮ್ಯಾಕ್ಸ್​ವೆಲ್​ (2-0-22-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಗ್ರೂಪ್-ಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ, ಇಂಗ್ಲೆಂಡ್ ತಂಡವು 4ನೇ ಸ್ಥಾನಕ್ಕೆ ಕುಸಿದಿದೆ. ಇದಲ್ಲದೆ ಇಂಗ್ಲೆಂಡ್​ ತಂಡದ ಸೂಪರ್​-8 ಹಾದಿಯು ದುರ್ಗಮಗೊಂಡಿದ್ದು, ಹಾಲಿ ಚಾಂಪಯನ್ನರಿಗೆ ತೀವ್ರ ಮುಖಭಂಗವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net