

ಬೆಂಗಳೂರು: ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದ್ದು, ಶುಕ್ರವಾರ (ಜೂನ್ 07) ಈ ಜೋಡಿಯು ಪರಸ್ಪರ ಒಪ್ಪಿಗೆ ಸೂಚಿಸಿ ವಿಚ್ಛೇದನ ಪಡೆದಿದ್ದಾರೆ. ತುಂಬಾ ಅನ್ಯೋನ್ಯವಾಗಿದ್ದ ಜೋಡಿಯು ಏಕಾಏಕಿ ವಿಚ್ಛೇದನದ ನಿರ್ಧಾರಕ್ಕೆ ಬರಲು ಏನು ಕಾರಣ ಎಂದು ಈವರೆಗೆ ತಿಳಿದು ಬಂದಿಲ್ಲ. ಅದರೆ, ಇವರಿಬ್ಬರನ್ನು ಒಂದು ಮಾಡಲು ನಟ ಪ್ರಥಮ್ ಮುಂದಾಗಿದ್ದರು. ಆದರೆ, ಈಗ ಅವರು ನನಗೆ ಇದರ ಸಹವಾಸವೇ ಬೇಡ ಎಂದು ಹೇಳಿದ್ದಾರೆ.
ಚಂದನ್- ನಿವೇದಿತಾ ವಿಚ್ಛೇದನದ ಬಗ್ಗೆ ಮಾತನಾಡಿದ್ದ ನಟ ಪ್ರಥಮ್, ಇಬ್ಬರೂ ಒಳ್ಳೆಯವರು, ಕೆಟ್ಟ ಗಳಿಗೆಯಲ್ಲಿ ಏನಾದರೂ ಆಗಿರಬಹುದು. ನಾನು ಇಬ್ಬರ ಬಳಿ ಮಾತನಾಡಿ ಸಂಧಾನಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು. ಚಂದನ್-ನಿವೇದಿತಾ ವಿಚ್ಛೇದನದ ವಿಚಾರವಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದ ನಟ ಪ್ರಥಮ್ ವಿರುದ್ಧ ಅನೇಕರು ಕಿಡಿಕಾರಿದ್ದರು. ಈ ಸಂಬಂಧ ನಟ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಚಂದನ್ ಶೆಟ್ಟಿ ನನ್ನ ಮದುವೆಗೆ ಬಂದಿದ್ರು, ಅವ್ರ ವಿಚಾರದಲ್ಲಿ ಸಂಧಾನ ಮಾಡೋಣ ಅಂತ ಶಕ್ತಿಮೀರಿ ಪ್ರಯತ್ನಿಸಿದೆ; ಹಾಳಾದ ಕೆಲವು ಯೂಟ್ಯೂಟ್ ವಿಡಿಯೋ ನಾನ್ ಹೇಳಿದ್ದಕ್ಕೆ ಏನೇನೋ ಶೀರ್ಷಿಕೆ ಹಾಕಿವೆ. ಇಲ್ಲಿಗೆ ನಿಲ್ಲಿಸಿ, ನನಗೂ ಇದಕ್ಕೂ ಇನ್ಮೇಲೆ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ ಎಂದು ಬರೆದುಕೊಂಡಿದ್ದಾರೆ.
ಕೆಲವು ಯೂಟ್ಯೂಬ್ ಚಾನೆಲ್‌ಗಳು ಚಿತ್ರ ವಿಚಿತ್ರ ಟೈಟಲ್ ಕೊಟ್ಟು ಪ್ರಥಮ್ ಮಾತನಾಡಿದ ವಿಡಿಯೋ ಅಪ್‌ಲೋಡ್ ಮಾಡಿವೆ. ತಮ್ಮ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಥಮ್ ಇನ್ನು ಮುಂದೆ ಇದಕ್ಕೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ. ಕಂಡವರ ಮನೆ ವಿಚಾರ ನಿಮಗ್ಯಾಕೆ, ಅವರ ಸಂಸಾರದಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದಾರೆ ಎಂದಿದ್ದ ನೆಟ್ಟಿಗರು, ಅವರಿಬ್ಬ ವಿಚಾರವನ್ನು ತಮ್ಮ ಜನಪ್ರಿಯತೆ, ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.