

ಬೆಂಗಳೂರು: ಟೀಮ್ ಇಂಡಿಯಾದ ದಿಗ್ಗಜ ಆಟಗಾರ, ದಾಖಲೆಗಳ ಸರದಾರ, ರನ್ ಮೆಷಿನ್, ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ ( Virat Kohli ) ಕಳೆದ 18 ವರ್ಷಗಳಿಂದ ಪ್ರತಿನಿಧಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ಐಪಿಎಲ್ ತಂಡವನ್ನು ತೊರೆಯಲು ಮುಂದಾಗಿದ್ದಾರೆ ಎಂಬ ಬಲವಾದ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.
ವಿರಾಟ್ ಕೊಹ್ಲಿ ಅವರು ಆರ್‌ಸಿಬಿಗೆ ಸಂಬಂಧಿಸಿದ ಹೊಸ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಇಂಥದ್ದೊಂದು ಚರ್ಚೆ ಎಲ್ಲೆಡೆ ಆರಂಭವಾಗಿದೆ. ಆದಾಗ್ಯೂ, ಈ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಆಪ್ತ ಮೂಲಗಳು ಸೂಚಿಸಿವೆ.
ಅಂದಹಾಗೆ, ಟೆಸ್ಟ್ ಮತ್ತು ಟ್ವೆಂಟಿ-20 ಸ್ವರೂಪಗಳಿಗೆ ವಿದಾಯ ಹೇಳಿರುವ ಕೊಹ್ಲಿ ಪ್ರಸ್ತುತ ಏಕದಿನ ಮಾದರಿ ಪಂದ್ಯಗಳಲ್ಲಿ ಮಾತ್ರ ಮುಂದುವರಿದಿದ್ದಾರೆ. ಅಲ್ಲದೆ, ಅವರ ಏಕದಿನ ಭವಿಷ್ಯವು ಕೂಡ ಸದ್ಯಕ್ಕೆ ಪ್ರಶ್ನೆಯಲ್ಲಿದೆ. ಅ.19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯೇ, ಕೊಹ್ಲಿ ಮತ್ತು ರೋಹಿತ್ ಅವರ ಕೊನೆಯ ಸರಣಿ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, 2027ರ ಏಕದಿನ ವಿಶ್ವಕಪ್ವರೆಗೂ ರೋಕೊ ಜೋಡಿ ತಂಡದಲ್ಲಿ ಮುಂದುವರಿಯಲಿದೆ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಕೊಹ್ಲಿ ಅವರ ಅಭಿಮಾನಿಗಳು ಅವರ ವೃತ್ತಿಜೀವನದ ಬಗ್ಗೆ ಪ್ರತಿಯೊಂದು ಸುದ್ದಿಯನ್ನು ಕುತೂಹಲದಿಂದ ನೋಡುತ್ತಿದ್ದಾರೆ.
ಇದೀಗ ಅಸಲಿ ವಿಚಾರದ ಕಡೆ ಬರೋಣ. ಅದೇನೆಂದರೆ, ಕೊಹ್ಲಿ ಅವರು ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ತಿರಸ್ಕರಿಸಿದ್ದರು ಕೂಡ ಕೊಹ್ಲಿ ಅವರ ಐಪಿಎಲ್ ವೃತ್ತಿಜೀವನದ ಮೇಲೆ ಇದು ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಅಂದರೆ, ಕೊಹ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. 2008ರ ಐಪಿಎಲ್‌ನ ಮೊದಲ ಸೀಸನ್‌ನಿಂದ ಹಿಡಿದು ಇಲ್ಲಿಯವರೆಗೂ ಆರ್‌ಸಿಬಿ ತಂಡವನ್ನು ಬದಲಾಯಿಸದೇ ಅವಿಭಾಜ್ಯ ಅಂಗವಾಗಿದ್ದಾರೆ. ಈ ಕಾರಣಕ್ಕೆ ಕೊಹ್ಲಿ ಅವರನ್ನು ಬೆಂಗಳೂರಿನ ದತ್ತು ಪುತ್ರ ಎಂದೇ ಕರೆಯುತ್ತಾರೆ. ಸುಮಾರು 18 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಅಂತಿಮವಾಗಿ 2025ರಲ್ಲಿ ಆರ್‌ಸಿಬಿ ತಂಡ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ಇದರ ಬೆನ್ನಲ್ಲೇ ಕೊಹ್ಲಿ ಆರ್ಬಿಸಿ ಬಿಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಾರೆ.
ಆದರೆ, ಕೊಹ್ಲಿ ಆರ್‌ಸಿಬಿ ಬಿಡುವುದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಿಂದ ನಿವೃತ್ತಿ ಹೊಂದುವುದಿಲ್ಲ. ಅವರು ಬೆಂಗಳೂರಿಗೆ ಮಾತ್ರ ಆಡುವುದಾಗಿ ಭರವಸೆ ನೀಡಿದ್ದಾರೆ. ಅವರು ಆ ಭರವಸೆಯನ್ನು ಮುರಿಯುವುದಿಲ್ಲ. ಆದರೆ, ಅವರು ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹೇಳಬೇಕೆಂದರೆ, ಇಲ್ಲಿ ಎರಡು ರೀತಿಯ ಒಪ್ಪಂದಗಳಿವೆ. ಒಂದು ಫ್ರ್ಯಾಂಚೈಸಿ ಒಪ್ಪಂದ, ಇನ್ನೊಂದು ವಾಣಿಜ್ಯ ಒಪ್ಪಂದ. ಆರ್‌ಸಿಬಿಯ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕದಿರಲು ಕಾರಣವೆಂದರೆ ಆರ್‌ಸಿಬಿಗೆ ಹೊಸ ಮಾಲೀಕರು ಬರಬಹುದು. ಹೊಸ ಮಾಲೀಕರು ಬಂದರೆ, ಅವರು ಫ್ರಾಂಚೈಸಿಯನ್ನು ನಿಯಂತ್ರಿಸುತ್ತಾರೆ. ಅಂತಹ ಬದಲಾವಣೆ ಸಂಭವಿಸಿದಲ್ಲಿ, ಹೊಸ ಚರ್ಚೆಗಳು ಮತ್ತು ಮಾತುಕತೆಗಳು ಬೇಕಾಗುತ್ತವೆ. ಅದಕ್ಕಾಗಿಯೇ ಕೊಹ್ಲಿ ಅವರು ಕಾಯುತ್ತಿದ್ದಾರೆ ಎಂದು ಕೈಫ್ ಹೇಳಿದರು.
ವಿರಾಟ್ ಕೊಹ್ಲಿ ಇದೀಗ ಆಟವಾಡಲು ಪ್ರಾರಂಭಿಸಿದ್ದಾರೆ. ಆರ್‌ಸಿಬಿ ಈಗಷ್ಟೇ ಟ್ರೋಫಿಗಳನ್ನು ಗೆಲ್ಲಲು ಪ್ರಾರಂಭಿಸಿದೆ. ಕಳೆದ ಸೀಸನ್ನಲ್ಲಿ ಕೊಹ್ಲಿ ಅವರು 650ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಪ್ರಶಸ್ತಿಯನ್ನೂ ಗೆದ್ದುಕೊಟ್ಟಿದ್ದಾರೆ. ಅವರು 2024ರ ಟಿ20 ವಿಶ್ವಕಪ್ ಫೈನಲ್ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ನಾವು ಸ್ವಲ್ಪ ಸಮಯ ಕಾಯಬೇಕಾಗಿದೆ. ಅವರು ಎಲ್ಲಿಗೂ ಹೋಗುತ್ತಿಲ್ಲ. ಅವರು ಆರ್‌ಸಿಬಿ ಪರ ಮಾತ್ರ ಆಡುತ್ತಾರೆ. ತಮ್ಮ ಅಭಿಮಾನಿಗಳಿಗೆ ನೀಡಿದ ಭರವಸೆಯನ್ನು ಕೊಹ್ಲಿ ಎಂದಿಗೂ ಮುರಿಯುವುದಿಲ್ಲ ಎಂದು ಮೊಹಮ್ಮದ್ ಕೈಫ್ ಹೇಳಿದರು. (ಏಜೆನ್ಸೀಸ್)