

ನವದೆಹಲಿ: ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ( Virat Kohli ) ಹಾಗೂ ರೋಹಿತ್ ಶರ್ಮ ( Rohit Sharma ) ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಎದುರಾದ ಪ್ರಶ್ನೆಗೆ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ( Gautam Gambhir ) ಅವರು ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿಮಗೆ ಗೊತ್ತಿದೆ ಗಂಭೀರ್ ಅವರು ನೇರ ನುಡಿಗೆ ಹೆಸರುವಾಸಿಯಾಗಿದ್ದಾರೆ. ಮನಸ್ಸಿಗೆ ಏನು ಅನಿಸುತ್ತದೆ ಅದನ್ನು ನೇರವಾಗಿ ಮಾತನಾಡುವುದು ಗಂಭೀರ್ ಅವರ ಸ್ವಭಾವವಾಗಿದೆ. ತಮ್ಮ ನೇರ ನುಡಿಯ ಕಾರಣಕ್ಕೆ ಅನೇಕ ಬಾರಿ ಗಂಭೀರ್ ಅವರು ವಿವಾದಕ್ಕೂ ಗುರಿಯಾಗಿದ್ದಾರೆ. ಹೀಗಿರುವಾಗ ಕೊಹ್ಲಿ ಮತ್ತು ರೋಹಿತ್ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ ಕೊಂಚವೂ ತಾಳ್ಮೆ ಕಳೆದುಕೊಳ್ಳದೇ ಸಾವಧಾನದಿಂದ ಸೂಕ್ತ ಉತ್ತರ ನೀಡಿದ್ದಾರೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳು ಟೆಸ್ಟ್ ಸರಣಿಯನ್ನು ಆತಿಥೇಯ ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಈ ಸರಣಿಯ ಬಳಿಕ ಇಂದು (ಅ.14) ನಡೆದ ಪತ್ರಿಕಾಗೋಷ್ಠಿಯಲ್ಲಿ ಗಂಭೀರ್ ಮಾತನಾಡಿದರು. ಈ ವೇಳೆ ಕೊಹ್ಲಿ ಹಾಗೂ ರೋಹಿತ್ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆ ಎದುರಾಯಿತು. ಅದೇನೆಂದರೆ, 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಕೊಹ್ಲಿ ಮತ್ತು ರೋಹಿತ್‌ಗೆ ಸ್ಥಾನ ಇದೆಯೇ? ಈ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂದು ಪ್ರಶ್ನೆ ಮಾಡಲಾಯಿತು.
ಈ ಪ್ರಶ್ನೆಗೆ ಗಂಭೀರ್ ಅವರು ನಾಜೂಕಾಗಿಯೇ ಉತ್ತರ ನೀಡಿದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ತೆಗೆದುಕೊಂಡ ನಿಲುವನ್ನೇ ಗಂಭೀರ್ ಅವರು ಪುನರುಚ್ಚರಿಸಿದರು. 2027ರ ವಿಶ್ವಕಪ್ಗೆ ಇನ್ನೂ ಎರಡು ವರ್ಷ ಸಮಯವಿದೆ. ಆದ್ದರಿಂದ, ಪ್ರಸ್ತುತ ನಮ್ಮ ಕೈಯಲ್ಲಿರುವ ಯೋಜನೆಗಳ ಮೇಲೆ ಗಮನಹರಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ಗಂಭೀರ್ ಉತ್ತರ ನೀಡಿದರು.
ಇದೇ ವೇಳೆ ಕೊಹ್ಲಿ ಮತ್ತು ರೋಹಿತ್ ಬಗ್ಗೆಯೂ ಮಾತನಾಡಿದ ಗಂಭೀರ್, ಅವರಿಬ್ಬರು ಒಳ್ಳೆಯ ಆಟಗಾರರು. ಅವರಿಬ್ಬರಿಗೂ ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಯಶಸ್ವಿದಾಯಕವಾಗಲಿದೆ ಎಂದು ಭಾವಿಸುತ್ತೇನೆ ಎಂದು ಗೌತಿ ಹೇಳಿದರು.
ಪ್ರಸ್ತುತ, ರೋಕೊ ಜೋಡಿ ಏಕದಿನ ಮಾದರಿ ಪಂದ್ಯವನ್ನು ಮಾತ್ರ ಆಡಲಿದೆ. ಟಿ20 ಹಾಗೂ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದ್ದು, ಇಬ್ಬರು ಯಾವ ರೀತಿಯ ಫಾರ್ಮ್ ಪ್ರದರ್ಶಿಸುತ್ತಾರೆ ಎಂದು ಕಾದು ನೋಡಬೇಕಿದೆ. ಏಕೆಂದರೆ, ಏಕದಿನ ಪಂದ್ಯದಲ್ಲಿ ಅವರಿಬ್ಬರು ಕಾಯ್ದುಕೊಳ್ಳುವ ಫಾರ್ಮ್, ವಿಶ್ವಕಪ್ ತಂಡದ ಮೇಲೆ ಪ್ರಭಾವ ಬೀರಲಿದೆ. ಒಂದು ವೇಳೇ ಫಾರ್ಮ್ ಕಾಯ್ದುಕೊಳ್ಳಲು ಫೇಲ್ ಆದರೆ, ರೋಕೊ ಜೋಡಿಯ ಏಕದಿನ ಕ್ರಿಕೆಟ್, ವಿಶ್ವಕಪ್ಗೂ ಮುಂಚೆಯೇ ಕೊನೆಯಾಗುವ ಸಾಧ್ಯತೆ ಇದೆ. ಇದರ ನಡುವೆ ಫಿಟ್‌ನೆಸ್ ಕಾಯ್ದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ವಿಶ್ವಕಪ್ ಹೊತ್ತಿಗೆ ರೋಹಿತ್‌ಗೆ 40 ವರ್ಷ ಮತ್ತು ಕೊಹ್ಲಿಗೆ 38 ವರ್ಷ ವಯಸ್ಸಾಗಿರುತ್ತದೆ. ಇನ್ನು ಇತ್ತೀಚೆಗೆ ರೋಹಿತ್ ಬದಲಿಗೆ ಶುಭಮಾನ್ ಗಿಲ್ ಅವರನ್ನು ಭಾರತದ ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಯಿತು.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತು. ಅದೇ ಕೊನೆಯ ಬಾರಿಗೆ ರೋಕೊ ಜೋಡಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿತು. ಸುದೀರ್ಘ ವಿರಾಮದ ಬಳಿಕ ಈ ಜೋಡಿ ಮತ್ತೊಮ್ಮೆ ಕ್ರಿಕೆಟ್ ಮೈದಾನಕ್ಕೆ ಎಂಟ್ರಿ ಕೊಡುತ್ತಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕೂಡ ಎದುರು ನೋಡುತ್ತಿದ್ದಾರೆ. ಅವರಿಬ್ಬರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)