ವಿಂಡೀಸ್​ ವಿರುದ್ಧ ವಿಕ್ಟರಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರೇಸ್​ನಲ್ಲಿ ಟೀಮ್​ ಇಂಡಿಯಾ ಸ್ಥಾನವೇನು? ಇಲ್ಲಿದೆ ಅಂಕಪಟ್ಟಿ...WTC

WTC
Published on

ನವದೆಹಲಿ: ಟೀಮ್​ ಇಂಡಿಯಾ 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ನಲ್ಲಿ ಸ್ಪರ್ಧಿಸುತ್ತಿದೆ. ಈ ಆವೃತ್ತಿಯಲ್ಲಿ ಭಾರತ ತನ್ನ ನಾಲ್ಕನೇ ಗೆಲುವನ್ನು ದಾಖಲಿಸಿದೆ. ದೆಹಲಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್​ ಇಂಡಿಯಾ ಏಳು ವಿಕೆಟ್‌ಗಳಿಂದ ಗೆದ್ದಿತು. ಈ ಗೆಲುವಿನೊಂದಿಗೆ, ಶುಭಮಾನ್​ ಗಿಲ್​ ನೇತೃತ್ವದ ಟೀಮ್​ ಇಂಡಿಯಾ WTC ಅಂಕಪಟ್ಟಿಯಲ್ಲಿ ತನ್ನ ಮೂರನೇ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಭಾರತ ತಂಡ ತನ್ನ ಅಂಕಗಳ ಶೇಕಡಾವಾರು ಪ್ರಮಾಣವನ್ನು 61.9 ಕ್ಕೆ ಹೆಚ್ಚಿಸಿಕೊಂಡಿದೆ.

ಪ್ರಸ್ತುತ WTC 2025-27 ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಇಲ್ಲಿಯವರೆಗೆ, ಆಸೀಸ್ ಮೂರು ಪಂದ್ಯಗಳನ್ನು ಆಡಿದೆ ಮತ್ತು ಮೂರನ್ನೂ ಗೆದ್ದಿದೆ. ಹೀಗಾಗಿ, ಶೇ. 100ರೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ತಂಡವು ಈವರೆಗೆ ಎರಡು ಪಂದ್ಯಗಳನ್ನು ಆಡಿದೆ ಮತ್ತು ಒಂದು ಪಂದ್ಯವನ್ನು ಗೆದ್ದಿದೆ. ಅಲ್ಲದೆ, ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಶ್ರೀಲಂಕಾ ತಂಡದ ಅಂಕಗಳ ಶೇಕಡಾವಾರು 66.67 ಇದೆ.

ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಇಂಗ್ಲೆಂಡ್ ಐದು ಪಂದ್ಯಗಳನ್ನು ಆಡಿದೆ, ಎರಡರಲ್ಲಿ ಗೆದ್ದಿದೆ, ಎರಡರಲ್ಲಿ ಸೋತಿದೆ ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ ಆಂಗ್ಲ ಪಡೆ ಶೇ. 43.33 ಅಂಕಗಳನ್ನು ಹೊಂದಿದೆ. ಇನ್ನು ಬಾಂಗ್ಲಾದೇಶ ಐದನೇ ಸ್ಥಾನದಲ್ಲಿದೆ. ಅವರು ಎರಡು ಪಂದ್ಯಗಳನ್ನು ಆಡಿದ್ದು, ಒಂದನ್ನು ಕಳೆದುಕೊಂಡಿದ್ದಾರೆ ಮತ್ತು ಒಂದನ್ನು ಡ್ರಾ ಮಾಡಿಕೊಂಡಿದ್ದಾರೆ. ಆದ್ದರಿಂದ ಬಾಂಗ್ಲಾ ಪಡೆ ಶೇ. 16.67 ಅಂಕಗಳನ್ನು ಹೊಂದಿದೆ.

ಭಾರತ ವಿರುದ್ಧದ ಸರಣಿಯಲ್ಲಿ ಸೋತಿರುವ ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ. ಈ ಸರಣಿಯಲ್ಲಿ ವೆಸ್ಟ್ ಇಂಡೀಸ್ 5 ಪಂದ್ಯಗಳನ್ನು ಆಡಿದ್ದು, ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.

WTC Point Table

ಅಂದಹಾಗೆ, ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ (IND vs WI) ಕ್ಲೀನ್ ಸ್ವೀಪ್ ಮಾಡಿದೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದು ಬೀಗಿತು. ಮೂರು ವಿಕೆಟ್‌ಗಳ ನಷ್ಟಕ್ಕೆ 121 ರನ್‌ಗಳ ಗುರಿಯನ್ನು ಬೆನ್ನತ್ತಿದ ಶುಭಮನ್ ಗಿಲ್ ಪಡೆ, 35.2 ಓವರ್‌ಗಳಲ್ಲಿ ಈ ಗುರಿಯನ್ನು ಸುಲಭವಾಗಿ ತಲುಪಿತು.

ಟೀಮ್ ಇಂಡಿಯಾದ ಪರ ಕನ್ನಡಿಗ ಕೆ.ಎಲ್. ರಾಹುಲ್ (ಅಜೇಯ 58 ರನ್​) ಮತ್ತು ಸಾಯಿ ಸುದರ್ಶನ್ (39 ರನ್) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಆರಂಭಿಕರಾದ ಯಶಸ್ವಿ ಜೈಸ್ವಾಲ್ (8) ಮತ್ತು ಶುಭಮನ್ ಗಿಲ್ (13) ತಂಡಕ್ಕೆ ರನ್​ಗಳ ಕೊಡುಗೆ ನೀಡುವಲ್ಲಿ ವಿಫಲರಾದರು. ವೆಸ್ಟ್ ಇಂಡೀಸ್ ಬೌಲರ್‌ಗಳ ಪರ ರೋಸ್ಟನ್ ಚೇಸ್ 2 ವಿಕೆಟ್‌ಗಳನ್ನು ಪಡೆದರೆ, ಜೋಮೆಲ್ ವಾರಿಕನ್ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net