ಅದನ್ನು ತಿಳಿಸುವುದೇ ನನ್ನ ಕೆಲಸವಲ್ಲ... ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಸ್ಟಾರ್​ ವೇಗಿ ಶಮಿ! Mohammed Shami

Mohammed Shami
Published on

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್ ಶಮಿ ( Mohammed Shami ) ಅವರು ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದರು. ಈ ವೇಳೆ ಅವರು ಮಿಸ್ಟರಿ ಸ್ಪಿನ್ನರ್​ ವರುಣ್ ಚಕ್ರವರ್ತಿ ಅವರೊಂದಿಗೆ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (9) ಎನಿಸಿಕೊಂಡರು. ಅಲ್ಲದೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಶಮಿ ಅವರನ್ನು ಆಯ್ಕೆ ಮಾಡಿಲ್ಲ. ಇದಕ್ಕೆ ಕಾರಣ ನೀಡಿರುವ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್, ಶಮಿ ಅವರ ಫಿಟ್​ನೆಸ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಇದರ ಬೆನ್ನಲ್ಲೇ ಶಮಿ ಅವರು ಆಯ್ಕೆದಾರರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಅಂದಹಾಗೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಈ ತಿಂಗಳ 19 ರಿಂದ ಪ್ರಾರಂಭವಾಗಲಿದೆ. ಮೊದಲು ಮೂರು ಪಂದ್ಯಗಳ ಏಕದಿನ ಸರಣಿ, ನಂತರ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಎರಡೂ ಸರಣಿಗಳಲ್ಲಿ ಭಾಗವಹಿಸುವ ಭಾರತೀಯ ತಂಡಗಳನ್ನು ಬಿಸಿಸಿಐ ಈಗಾಗಲೇ ಆಯ್ಕೆ ಮಾಡಿದೆ. ಆಯ್ಕೆದಾರರು ಈ ಎರಡೂ ತಂಡಗಳಲ್ಲಿ ಶಮಿಗೆ ಸ್ಥಾನ ನೀಡಿಲ್ಲ. ಶಮಿ ಅವರ ಫಿಟ್​ನೆಸ್​ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ, ಅದಕ್ಕಾಗಿಯೇ ಅವರನ್ನು ಪರಿಗಣಿಸಲಾಗಿಲ್ಲ ಎಂದು ತಂಡಗಳನ್ನು ಘೋಷಿಸುವಾಗ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದರು.

ಈ ವಿಚಾರವಾಗಿ ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಮಿ, ಫಿಟ್​ನೆಸ್ ಬಗ್ಗೆ ಆಯ್ಕೆ ಸಮಿತಿಗೆ ತಿಳಿಸುವುದು ನನ್ನ ಕೆಲಸವಲ್ಲ ಎಂದು ಖಾರವಾಗಿ ಮಾತನಾಡಿದ್ದಾರೆ. ಆಯ್ಕೆ ಮಾಡುವುದು ನನ್ನ ಕೈಯಲ್ಲಿಲ್ಲ. ನನಗೆ ಫಿಟ್​ನೆಸ್​ ಸಮಸ್ಯೆ ಇದ್ದರೆ ನಾನೇಕೆ ಬಂಗಾಳ ಪರ ರಣಜಿ ಕ್ರಿಕೆಟ್ ಆಡುತ್ತೇನೆ ಎಂದು ಪ್ರಶ್ನೆ ಮಾಡಿದ ಶಮಿ, ತಂಡದ ಆಯ್ಕೆ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸುವ ಅಗತ್ಯ ನನಗಿಲ್ಲ ಎಂದು ಹೇಳಿದರು.

ರಣಜಿ ಟ್ರೋಫಿಯಲ್ಲಿ 4 ದಿನಗಳ ಪಂದ್ಯವನ್ನಾಡಲು ನನಗೆ ಸಾಧ್ಯವಾದರೆ, 50 ಓವರ್‌ಗಳ ಕ್ರಿಕೆಟ್ ಕೂಡ ಆಡಬಹುದು ತಾನೇ ಎಂದು ಹೇಳಿದರು. ಫಿಟ್‌ನೆಸ್ ಬಗ್ಗೆ ಕೇಳುವುದು, ಹೇಳುವುದು ಅಥವಾ ಮಾಹಿತಿ ನೀಡುವುದು ನನ್ನ ಜವಾಬ್ದಾರಿಯಲ್ಲ. ಎನ್‌ಸಿಎಗೆ ಹೋಗಿ, ಸಿದ್ಧರಾಗಿ ಪಂದ್ಯ ಆಡುವುದೊಂದೇ ನನ್ನ ಕೆಲಸ ಎನ್ನುವ ಮೂಲಕ ಆಯ್ಕೆದಾರರ ವಿರುದ್ಧ ಶಮಿ ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net