

ನವದೆಹಲಿ: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಆಸೀಸ್ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮ (Rohit & Virat) ನಿವೃತ್ತಿ ಕುರಿತಂತೆ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ಭುಗಿಲೆದ್ದಿವೆ.
ಇದನ್ನೂ ಓದಿ: ಕೈಗೆ ಸಿಗದ ಪಕ್ಷದ ವರಿಷ್ಠರು, ರಾಜ್ಯ ನಾಯಕರಿಗೆ ನಿರಾಸೆ
ನಾಲ್ಕನೇ ಟೆಸ್ಟ್ಗೂ ಮುನ್ನ 1-1 ಅಂತರದಲ್ಲಿ ಪೈಪೋಟಿಗೆ ಇಳಿದಿದ್ದ ಟೀಮ್ ಇಂಡಿಯಾ, ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಗೆಲುವಿನ ನಿರೀಕ್ಷೆಯನ್ನು ಹೊತ್ತಿತ್ತು. ಆದರೆ, ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರೇ ಉತ್ತಮ ಪ್ರದರ್ಶನ ನೀಡುವಲ್ಲಿ ಸತತವಾಗಿ ವಿಫಲವಾಗಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂಬುದು ಒಂದಷ್ಟು ಕ್ರಿಕೆಟ್ ಪ್ರಿಯರ ಅನಿಸಿಕೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರು ಸಹ ತಮ್ಮ ಅಭಿಪ್ರಾಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರನ್ ಕಲೆಹಾಕುವಲ್ಲಿ ಎಡವಿದ ರೋಹಿತ್ ಹಾಗೂ ವಿರಾಟ್, ಸತತವಾಗಿ ಕಳಪೆ ಪ್ರದರ್ಶನ ತೋರಿರುವುದು ಸದ್ಯ ಅವರ ನಿವೃತ್ತಿಯನ್ನು ಪ್ರಶ್ನಿಸುವಂತೆ ಮಾಡಿದೆ. ಇದೇ ವಿಚಾರವನ್ನು ಮುನ್ನೆಲೆಗೆ ತಂದಿರುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರಿಂದರ್ ಖನ್ನಾ, "ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಏನು ಮಾಡ್ತಿದ್ದಾರೆ? ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ. ಕಳೆದ 40ರಿಂದ 45 ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಮತ್ತು ರೋಹಿತ್ ಏನು ಮಾಡಿದ್ದಾರೆ? ಆಯ್ಕೆಗಾರರು ತಮ್ಮನ್ನು ಹೊರಗಿಡದಿದ್ದರೆ ಅವರೇ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ. ನಾವು ಅಥವಾ ನೀವ್ಯಾರು ಅವರನ್ನು ಹೊರಗಿಡಲು ಸಾಧ್ಯವಿಲ್ಲ. ಡೇವಿಡ್ ಗೋವರ್ ಮತ್ತು ಗುಂಡಪ್ಪ ವಿಶ್ವನಾಥ್ ಅವರು ಕೇವಲ ಕಟ್ ಶಾಟ್ ಮೂಲಕವೇ ಅತೀ ಹೆಚ್ಚು ರನ್ ಗಳಿಸಿದವರು" ಎಂದು ಹೇಳಿದರು.
"ಸ್ಟಾರ್ ಬ್ಯಾಟರ್ಗಳಾದ ಕೊಹ್ಲಿ ಮತ್ತು ರೋಹಿತ್ ಫಾರ್ಮ್ನಿಂದ ಹೊರಗಿದ್ದಾರೆ ಮತ್ತು ಆಯ್ಕೆಗಾರರು ನಿರ್ಧಾರ ತೆಗೆದುಕೊಳ್ಳಬೇಕಿದೆ. ಅವರಿಬ್ಬರು ನಿವೃತ್ತಿ ಘೋಷಿಸದಿದ್ದರೆ. ನಂತರದಲ್ಕಿ ಆಯ್ಕೆಗಾರರೇ ಮುಂದಾಳತ್ವ ವಹಿಸಿ, ಏನಾದರೂ ಹೇಳುವುದು ಒಳಿತು. ಮುಂದಿನ ಟೆಸ್ಟ್ನಲ್ಲಿ ಯುವ ಆಟಗಾರರನ್ನು ಆಡಿಸಿ, ಆಗ ನಾವು ಬುಮ್ರಾ ನೇತೃತ್ವದಲ್ಲಿ ಮೊದಲ ಟೆಸ್ಟ್ ಗೆದ್ದಂತೆ ಮತ್ತೆ ಗೆಲುವಿಗೆ ಮರಳುತ್ತೇವೆ. ನಾನು ಹೇಳುವುದು ಬಹಳ ಕಟು ಅನಿಸಿದರೂ ಇದೇ ಸರಿ. ನಾವು ಗೆಲ್ಲಬೇಕಾದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಿದೆ" ಎಂದಿದ್ದಾರೆ ಸುರಿಂದರ್,(ಏಜೆನ್ಸೀಸ್).