

ನವದೆಹಲಿ: ಇದೇ ಜೂನ್ 01ರಿಂದ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024ರ ಪಂದ್ಯಕ್ಕೆ ಸದ್ಯ ಟೀಂ ಇಂಡಿಯಾ ಸಜ್ಜಾಗಿದ್ದು, ಇತ್ತೀಚೆಗಷ್ಟೇ ಬಿಸಿಸಿಐ 15 ಸದಸ್ಯರ ತಂಡವನ್ನು ಅಧಿಕೃತವಾಗಿ ಪ್ರಕಟಿಸಿತು. ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐನ ಮುಖ್ಯ ಆಯ್ಕೆಗಾರರಾದ ಅಜಿತ್ ಅಗರ್ಕರ್ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾರಿಂದ ಕಸಿದುಕೊಳ್ಳುವ ಮೂಲಕ ಕೇವಲ ಎಂಐ ಅಭಿಮಾನಿಗಳಿಗೆ ಮಾತ್ರವಲ್ಲದೇ ಕ್ರಿಕೆಟ್ ಫ್ಯಾನ್ಸ್ಗಳಲ್ಲಿ ಭಾರೀ ಅಚ್ಚರಿ ಮೂಡಿಸಿದರು. ಅಂದಿನಿಂದಲೂ ಇಂದಿನವರೆಗೆ ಮುಂಬೈ ತಂಡದಲ್ಲಿ ಯಾವುದು ಸರಿ ಕಾಣಿಸುತ್ತಿಲ್ಲ. ಹಾರ್ದಿಕ್ ಕ್ಯಾಪ್ಟನ್ಸಿ ಪ್ರಶ್ನಿಸಿದ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು. ಎಂಐ ನಾಯಕತ್ವದ ಬದಲಾವಣೆಯ ಬಗ್ಗೆ ಏಕೆ ರೋಹಿತ್ ಶರ್ಮಾ ಮೌನಿಯಾಗಿದ್ದಾರೆ? ಎಂದು ಅನುಮಾನಿಸಿದ್ದ ಅಭಿಮಾನಿಗಳಿಗೆ ಇದೀಗ ರೋಹಿತ್ ಸಾರ್ವಜನಿಕವಾಗಿ ಶಾಕಿಂಗ್ ರೀತಿಯಲ್ಲಿ ಉತ್ತರಿಸಿದ್ದಾರೆ.
"ನೀವು ಬಯಸಿದ್ದೆಲ್ಲಾ ನಿಮಗೆ ಸಿಗೋದಿಲ್ಲ. ಆದರೆ, ನಾನಂತೂ ಸದ್ಯ ಖಷಿಯಿಂದ ಇದ್ದೀನಿ. ಇಷ್ಟು ವರ್ಷಗಳಲ್ಲಿ ಹಲವಾರು ಕ್ಯಾಪ್ಟನ್ಗಳಡಿ ಆಡಿದ್ದೇನೆ. ಸದ್ಯಕ್ಕೆ ನನ್ನ ಗುರಿ ಇರುವುದು ಮುಂಬರುವ ಪಂದ್ಯಗಳ ಮೇಲೆ, ಹಾಗಾಗಿ ನನ್ನಿಂದ ತಂಡಕ್ಕೆ ಏನು ಕೊಡುಗೆ ಕೊಡಬಹುದೋ ಅದರ ಬಗ್ಗೆ ಮಾತ್ರ ಹೆಚ್ಚು ಗಮನಹರಿಸುತ್ತಿದ್ದೀನಿ. ಈ ಹಿಂದೆ ಕ್ಯಾಪ್ಟನ್ ಆಗಿದ್ದೆ, ಅದಾದ ಮೇಲೆ ಇರಲಿಲ್ಲ, ತದನಂತರ ಮತ್ತೆ ನಾಯಕ ಸ್ಥಾನ ಅಲಂಕರಿಸಿದೆ. ಇದೆಲ್ಲವೂ ಜೀವನದ ಒಂದು ಭಾಗ. ಮುಂಬೈ ಇಂಡಿಯನ್ಸ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರ ಬಗ್ಗೆ ನನಗೆ ಸಂತಸವಿದೆ. ಈಗ ಒಬ್ಬ ತಂಡದ ಆಟಗಾರನಾಗಿ ಏನೆಲ್ಲಾ ಮಾಡಬಹುದು ಎಂಬುದನ್ನು ಎದುರುನೋಡುತ್ತಿದ್ದೇನೆ" ಎಂದಿದ್ದಾರೆ ರೋಹಿತ್.
ಸದ್ಯ ಕ್ಯಾಪ್ಟನ್ಸಿ ವಿವಾದದ ಬಗ್ಗೆ ಅತೀವ ಬೇಸರವಿದ್ದರು ಸಹ ರೋಹಿತ್ ಮಾತ್ರ ಎಲ್ಲಿಯೂ ತಮ್ಮ ಭಾವನೆಗಳನ್ನು ಹೊರಹಾಕದೆ, ನಾಯಕನ ಸ್ಥಾನದಲ್ಲಿ ಕುಳಿತು ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂದು ಚಿಂತಿಸಿ, ಇಲ್ಲಿ ಮಾತನಾಡಿರುವುದು ಗಮನಾರ್ಹ. ಸದ್ಯ ಇದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ನಾಯಕನಾಗಿ ಟಿ-20 ವಿಶ್ವಕಪ್ ಗೆದ್ದು ಬನ್ನಿ ಎಂದು ನೆಟ್ಟಿಗರು ಶುಭಹಾರೈಸಿದ್ದಾರೆ,(ಏಜೆನ್ಸೀಸ್).