

ಹೈದರಾಬಾದ್: ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (76* ರನ್, 42 ಎಸೆತ, 3 ಬೌಂಡರಿ, 8 ಸಿಕ್ಸರ್) ಅಮೋ ಬ್ಯಾಟಿಂಗ್ ಮತ್ತು ಅನುಭವಿ ವೇಗಿ ಭುವನೇಶ್ವರ್ ಕುಮಾರ್ (41ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್&17ರಲ್ಲಿ ಟೇಬಲ್ ಟಾಪರ್ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದೆ. ಸತತ 4 ಜಯದೊಂದಿಗೆ ಬೀಗುತ್ತಿದ್ದ ರಾಜಸ್ಥಾನ ಗುರುವಾರ ನಡೆದ ಟೂರ್ನಿಯ 50ನೇ ಪಂದ್ಯದಲ್ಲಿ ಸನ್ರೈಸರ್ಸ್ ಎದುರು ಕೇವಲ 1 ರನ್ನಿಂದ ಶರಣಾಯಿತು. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಪಡೆ ಸತತ 2 ಸೋಲಿನ ಬಳಿಕ ಜಯದ ಹಾದಿಗೆ ಮರಳಿತು.
ಆರ್ಜಿಐ ಸ್ಟೇಡಿಯಂನಲ್ಲಿ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಸನ್ರೈಸರ್ಸ್, 3 ವಿಕೆಟ್ಗೆ 201 ರನ್ ಕಲೆಹಾಕಿತು. ಪ್ರತಿಯಾಗಿ ರಾಯಲ್ಸ್ ಆರಂಭಿಕ ಆಘಾತದ ನಡುವೆ ಯಶಸ್ವಿ ಜೈಸ್ವಾಲ್ (67 ರನ್, 40 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ರಿಯಾನ್ ಪರಾಗ್ (77 ರನ್, 49 ಎಸೆತ, 8 ಬೌಂಡರಿ, 4 ಸಿಕ್ಸರ್) ಹೋರಾಟದಿಂದ ಜಯದತ್ತ ಸಾಗಿತು. ಆದರೆ ಕೊನೇ 5 ಓವರ್ಗಳಲ್ಲಿ ಲಯ ತಪ್ಪಿದ ರಾಯಲ್ಸ್ 7 ವಿಕೆಟ್ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೇ ಎಸೆತದಲ್ಲಿ ಭುವಿ ಮ್ಯಾಜಿಕ್
ಭುವನೇಶ್ವರ್ ರಾಯಲ್ಸ್ ಇನಿಂಗ್ಸ್ನ ಮೊದಲ ಮತ್ತು ಕೊನೇ ಓವರ್ನಲ್ಲಿ ಬಿಗಿ ದಾಳಿ ನಡೆಸಿ ಸನ್ಗೆ ಜಯ ತಂದರು. ಕೊನೇ ಓವರ್ನಲ್ಲಿ 13 ರನ್ ಬೇಕಿದ್ದಾಗ ಅಶ್ವಿನ್ ಮೊದಲ ಎಸೆತದಲ್ಲಿ ಸಿಂಗಲ್ಸ್ ಕಸಿದರೆ, ನಂತರದ 4 ಎಸೆತಗಳಲ್ಲಿ ರೊವ್ಮನ್ ಪೊವೆಲ್ (27) 10 ರನ್ ಕಸಿದರು. ಆದರೆ ಕೊನೇ ಎಸೆತದಲ್ಲಿ 2 ರನ್ ಬೇಕಿದ್ದಾಗ ಪೊವೆಲ್ರನ್ನು ಎಲ್ಬಿ ಬಲೆಗೆ ಬೀಳಿಸಿದ ಭುವನೇಶ್ವರ್ ಗೆಲುವಿನ ರೂವಾರಿಯಾದರು.