ಸೋಲಿನ ಚಿಂತೆಯನ್ನು ಬದಿಗಿಟ್ಟು ಪತ್ನಿ, ಮಗಳೊಂದಿಗೆ ಹೋಳಿ ಆಚರಿಸಿ ಸಂಭ್ರಮಿಸಿದ ರೋಹಿತ್​!

Rohit Sharma Holi
Published on

ಮುಂಬೈ: ಗುಜರಾತ್​ ಟೈಟಾನ್ಸ್​ ವಿರುದ್ಧ 6 ರನ್​ಗಳ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್​ ತಂಡ ಐಪಿಎಲ್ ಅಭಿಯಾನ ಆರಂಭಿಸಿದೆ. ಮೊದಲ ಪಂದ್ಯದಲ್ಲಿ ಸೋತರು ರೋಹಿತ್​ ಶರ್ಮ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಶರ್ಮ ಜತೆ ಹೋಳಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.

ಹೋಳಿ ಆಚರಣೆಯ ವಿಡಿಯೋವನ್ನು ರೋಹಿತ್​ ಶರ್ಮ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಹ್ಯಾಪಿ ಹೋಳಿ ಎಂದು ಶುಭಕೋರಿದ್ದಾರೆ. ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಕೂಡ ವಿಡಿಯೋವನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಎಲ್ಲರಿಗೂ ಹ್ಯಾಪಿ ಹೋಳಿ ಎಂದು ಶುಭ ಹಾರೈಸಿದೆ.

ರೋಹಿತ್​ ಶರ್ಮ ಬಣ್ಣಗಳಿಂದ ಸಂಪೂರ್ಣ ಮಿಂದೆದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪತ್ನಿ ಮತ್ತು ಮಗಳಿಗೆ ರೋಹಿತ್​ ಬಣ್ಣ ಬಳಿಯುತ್ತಿರುವುದು ಮತ್ತು​ ತುಂಟಾಟ ಆಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ನೀರಿನಲ್ಲಿ ಜಾರುವುದರ ಜತೆಗೆ ರೋಹಿತ್​ ಕುಣಿದು ಕುಪ್ಪಳಿಸಿದ್ದಾರೆ. ಮಗಳ ಮುಂದೆಯೇ ಡಾನ್ಸ್​ ಮಾಡಿದ್ದು, ಹೀಗೆ ಸಾಕಷ್ಟು ಸುಂದರ ಕ್ಷಣಗಳು ರೋಹಿತ್​ ಶೇರ್​ ಮಾಡಿಕೊಂಡಿರುವ ವಿಡಿಯೋದಲ್ಲಿದೆ.

ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕೇವಲ ಒಂದು ಗಂಟೆಯಲ್ಲಿ 23 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್​ಗಳ ಮೂಲಕ ಹೋಳಿ ಹಬ್ಬದ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ತಂಡ ಗುಜರಾತ್​ಗೆ ಬ್ಯಾಟ್ ಮಾಲು ಅವಕಾಶ ನೀಡಿತು. 20 ಓವರ್‌ಗಳಲ್ಲಿ ಗುಜರಾತ್​ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 120 ಬಾಲ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕಡೆಯ ಓವರ್​ವರೆಗೂ ಹೋದ ಈ ಪಂದ್ಯ ಬಹಳ ರೋಚಕವಾಗಿ ಸಾಗಿತು. ಅಂತಿಮವಾಗಿ 6 ರನ್​ಗಳಿಂದ ಮುಂಬೈ ಹೀನಾಯ ಸೋಲು ಅನುಭವಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net