More

    ಆಕಾಶ್​ ಅಂಬಾನಿ ಮುಂದೆಯೇ ಹಾರ್ದಿಕ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೋಹಿತ್!​ ವಿಡಿಯೋ ವೈರಲ್​

    ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯ ಆರಂಭಕ್ಕೂ ಮುನ್ನ ಮುಂಬೈ ತಂಡದಲ್ಲಾದ ನಾಯಕತ್ವ ಬದಲಾವಣೆಯಿಂದಾಗಿ ಮಾಜಿ ನಾಯಕ ರೋಹಿತ್​ ಶರ್ಮ ಮತ್ತು ಹಾಲಿ ನಾಯಕ ಹಾರ್ದಿಕ್​ ಪಾಂಡ್ಯ ನಡುವಿನ ಸಂಬಂಧಕ್ಕೆ ಹುಳಿ ಬಿದ್ದಂತಾಗಿದೆ. ನಿನ್ನೆ ಗುಜರಾತ್​ ಟೈಟಾನ್ಸ್​ ವಿರುದ್ಧ ನಡೆದ ಪಂದ್ಯದ ಸಮಯದಲ್ಲೂ ಇಬ್ಬರ ನಡುವೆ ಮನಸ್ತಾಪ ಇರುವುದು ಗೋಚರವಾಗಿದೆ.

    ರೋಹಿತ್​ರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿದ್ದು, ಕ್ರೀಡಾಭಿಮಾನಿಗಳಿಗೆ ಸ್ವಲ್ಪವೂ ಇಷ್ಟವಿಲ್ಲ. ಒಬ್ಬ ಹಿರಿಯ ಆಟಗಾರನನನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲೇ ಇದರ ಪರಿಣಾಮವೂ ಗೋಚರವಾಯಿತು. ಏಕೆಂದರೆ, ಗುಜರಾತ್​ ಟೈಟಾನ್ಸ್​ ವಿರುದ್ಧ ಮುಂಬೈ ತಂಡ ಹೀನಾಯ ಸೋಲನ್ನು ಅನುಭವಿಸಿತು.

    ನಿನ್ನೆಯ ಪಂದ್ಯದಲ್ಲಿ ಹಾರ್ದಿಕ್​ ಮಾಡಿದ ಅವಾಂತರಗಳಿಂದ ಅಭಿಮಾನಿಗಳು ಸಿಟ್ಟಿಗೆದ್ದರು. ಕ್ಷೇತ್ರ ರಕ್ಷಣೆ ವೇಳೆ ಸ್ಥಾನ ಬದಲಾಯಿಸುವಂತೆ ರೋಹಿತ್​ಗೆ ಹಾರ್ದಿಕ್​ ಸೂಚನೆ ನೀಡಿದ್ದು ಫ್ಯಾನ್ಸ್​ಗೆ ಕೊಂಚವೂ ಇಡಿಸಲಿಲ್ಲ. ಹೀಗಾಗಿ ಪ್ರತಿಬಾರಿ ಚೆಂಡು ಹಾರ್ದಿಕ್​ ಬಳಿ ಬಂದಾಗ ಅಥವಾ ಕ್ರೀಡಾಂಗಣದ ದೊಡ್ಡ ಪರದೆಯ ಮೇಲೆ ಹಾರ್ದಿಕ್​ ಕಾಣಿಸಿಕೊಂಡಾಗ ಫ್ಯಾನ್ಸ್​ ಕಿರುಚಾಡುವ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದರು. ಇದರಿಂದ ಹಾರ್ದಿಕ್​ಗೂ ಅವಮಾನವಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಜಾಲತಾಣದಲ್ಲಿ ಮತ್ತೊಂದು ವಿಡಿಯೋ ತುಣುಕು ಹರಿದಾಡುತ್ತಿದೆ. ಅದರಲ್ಲಿ ರೋಹಿತ್​, ಹಾರ್ದಿಕ್ ವಿರುದ್ಧ ಸಿಟ್ಟಿಗೆದ್ದಿರುವುದನ್ನು ಕಾಣಬಹುದು. ಪಂದ್ಯ ಮುಗಿದ ಬಳಿಕ ಹಿಂದಿನಿಂದ ಬಂದು ರೋಹಿತ್​ರನ್ನು ಹಾರ್ದಿಕ್​ ತಬ್ಬಿಕೊಳ್ಳುತ್ತಾರೆ. ಬಳಿಕ ಇಬ್ಬರು ತೀವ್ರ ಚರ್ಚೆಯಲ್ಲಿ ತೊಡಗುತ್ತಾರೆ. ಪಂದ್ಯ ಸೋತ ಸಿಟ್ಟಿನಿಂದ ಹಾರ್ದಿಕ್​ರನ್ನು ರೋಹಿತ್​ ತರಾಟೆಗೆ ತೆಗೆದುಕೊಂಡಂತೆ ವಿಡಿಯೋದಲ್ಲಿ ಭಾಸವಾಗುತ್ತದೆ. ಮುಂಬೈ ತಂಡದ ಮಾಲೀಕ ಆಕಾಶ್​ ಅಂಬಾನಿ ಮುಂದೆಯೇ ಇದೆಲ್ಲವೂ ನಡೆಯುತ್ತದೆ. ಗುಜರಾತ್​ ಟೈಟಾನ್ಸ್​ ತಂಡದ ರಶೀದ್​ ಖಾನ್​ ಸಹ ಅಲ್ಲಿಯೇ ಇದ್ದರು. ಹಾರ್ದಿಕ್​ ಮತ್ತು ರೋಹಿತ್​ ವಾಗ್ವಾದವನ್ನು ನೋಡಿ ಆಕಾಶ್​ ಅಂಬಾನಿ ಮತ್ತು ರಶೀದ್​ ಖಾನ್​ ಸ್ಥಳದಿಂದ ಕಾಲ್ಕಿಳುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲೇ ಸಂಪೂರ್ಣ ವಿಫಲವಾದರು. ಬ್ಯಾಟರ್ ಮತ್ತು ನಾಯಕನಾಗಿ ಅವರು ಯಾವುದೇ ಪ್ರಭಾವವನ್ನು ಬೀರಲಿಲ್ಲ. ತಂಡದ ಸೋಲಿಗೆ ಅವರ ವೈಫಲ್ಯವೂ ಒಂದು ಪ್ರಮುಖ ಕಾರಣ ಎನ್ನಬಹುದು. ಬೌಲಿಂಗ್‌ನಲ್ಲಿ ಅವರು ಬುಮ್ರಾ ಮತ್ತು ಗೆರಾಲ್ಡ್​ ಕೊಯೆಟ್ಜಿಯಂತಹ ವಿಶ್ವ ದರ್ಜೆಯ ಬೌಲರ್‌ಗಳೊಂದಿಗೆ ಮೊದಲ ಓವರ್​ ಬೌಲ್ ಮಾಡಿದರು. ಬುಮ್ರಾ ಮತ್ತು ಕೊಯೆಟ್ಜಿ 5 ವಿಕೆಟ್ ಪಡೆದರೆ, ಪಾಂಡ್ಯ ಒಂದೇ ಒಂದು ವಿಕೆಟ್ ಪಡೆಯದೆ 3 ಓವರ್‌ಗಳಲ್ಲಿ 30 ರನ್ ನೀಡಿದರು. ಇದಿಷ್ಟೇ ಅಲ್ಲದೆ, ಪವರ್ ಪ್ಲೇನಲ್ಲಿ ತನಗೆ ಇಷ್ಟವಾದವರಿಗೆ ಬೌಲಿಂಗ್ ಅವಕಾಶ ನೀಡುತ್ತಿದ್ದರು. ಫೀಲ್ಡಿಂಗ್​ ಸ್ಥಾನಗಳೂ ಸಹ ಸರಿಯಾಗಿರಲಿಲ್ಲ. ಬ್ಯಾಟಿಂಗ್‌ ವೇಳೆ ಅಗತ್ಯದ ಸಮಯದಲ್ಲಿ ತಾನು ಕ್ರೀಸ್​ಗೆ ಇಳಿಯದೆ ಟಿಮ್ ಡೇವಿಡ್‌ನನ್ನು ಕಳುಹಿಸಿದರು. ಹಾರ್ದಿಕ್, ಸ್ಪಿನ್​ ಬೌಲರ್​ ರಶೀದ್ ಖಾನ್ ಅವರನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸಿದ್ದರೆ ಮುಂಬೈಗೆ ಗೆಲುವು ಸುಲಭವಾಗುತ್ತಿತ್ತು. ಸ್ಪಿನ್ ಆಡುವಲ್ಲಿ ದುರ್ಬಲರಾದ ಡೇವಿಡ್ ಅವರನ್ನು ಕಳುಹಿಸಿದರು. ಇತ್ತ ತಿಲಕ್ ಕೂಡ ರಶೀದ್ ಅವರನ್ನು ಎದುರಿಸಲು ಸಾಧ್ಯವಾಗದೆ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಬಂದ ಪಾಂಡ್ಯ ಕೂಡ ಬ್ಯಾಟಿಂಗ್​ನಲ್ಲಿ ಅಬ್ಬರಿಸಲಿಲ್ಲ.

    ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ತಂಡ ಗುಜರಾತ್​ಗೆ ಬ್ಯಾಟ್ ಮಾಲು ಅವಕಾಶ ನೀಡಿತು. 20 ಓವರ್‌ಗಳಲ್ಲಿ ಗುಜರಾತ್​ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 120 ಬಾಲ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕಡೆಯ ಓವರ್​ವರೆಗೂ ಹೋದ ಈ ಪಂದ್ಯ ಬಹಳ ರೋಚಕವಾಗಿ ಸಾಗಿತು. ಅಂತಿಮವಾಗಿ 6 ರನ್​ಗಳಿಂದ ಮುಂಬೈ ಹೀನಾಯ ಸೋಲು ಅನುಭವಿಸಿತು. (ಏಜೆನ್ಸೀಸ್​)

    ಮೊದಲ ಪಂದ್ಯದಲ್ಲೇ ಹಾರ್ದಿಕ್​ ಅಟ್ಟರ್​ಫ್ಲಾಪ್​! ಮುಂಬೈ ಸೋಲಿಗೆ ಪ್ರಮುಖ ಕಾರಣಗಳು ಹೀಗಿವೆ…

    ಸೋನು ಗೌಡಗೆ 14 ದಿನ ನ್ಯಾಯಾಂಗ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts