More

    ಮೊದಲ ಪಂದ್ಯದಲ್ಲೇ ಹಾರ್ದಿಕ್​ ಅಟ್ಟರ್​ಫ್ಲಾಪ್​! ಮುಂಬೈ ಸೋಲಿಗೆ ಪ್ರಮುಖ ಕಾರಣಗಳು ಹೀಗಿವೆ…

    ಮುಂಬೈ: ಪ್ರಸಕ್ತ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಅದರಲ್ಲೂ ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಪಡೆ, ಗುಜರಾತ್​ ಟೈಟಾನ್ಸ್​ ವಿರುದ್ಧ ಸೋತಿದ್ದು, ದುರಾದೃಷ್ಟಕರ. ಏಕೆಂದರೆ, ಇದೇ ಗುಜರಾತ್​ ತಂಡವನ್ನು ಹಾರ್ದಿಕ್, ಕಳೆದ ಎರಡು ಸೀಸನ್​​ ಮುನ್ನಡೆಸಿದ್ದರು ಮತ್ತು ಒಂದು ಬಾರಿ ಟ್ರೋಫಿ ಸಹ ಜಯಸಿದ್ದರು. ಆದರೆ, ಕಾರಣಾಂತರಗಳಿಂದ ಗುಜರಾತ್​ ತಂಡಕ್ಕೆ ಕೈಕೊಟ್ಟು ಮುಂಬೈ ಸೇರಿ, ರೋಹಿತ್​ ಶರ್ಮರಿಂದ ನಾಯಕತ್ವ ಕಸಿದ ಹಾರ್ದಿಕ್​ಗೆ ನಿನ್ನೆಯ ಸೋಲು ಭಾರಿ ಮುಖಭಂಗವಾಗಿದೆ.

    ನಿನ್ನೆ ಐಪಿಎಲ್​ ಅಭಿಯಾನ ಆರಭಿಸಿದ ಮುಂಬೈ, ಗುಜರಾತ್​ ಎದುರು 6 ರನ್​ಗಳ ಸೋಲುಂಡಿದೆ. ಒಟ್ಟಾರೆಯಾಗಿ ಮುಂಬೈ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರೂ ನಿರ್ಣಾಯಕ ಸಮಯದಲ್ಲಿ ಒತ್ತಡಕ್ಕೆ ಸಿಲುಕಿತು ಪಂದ್ಯವನ್ನು ಕೈಚೆಲ್ಲಿತು. ಈ ಪಂದ್ಯದಲ್ಲಿ ಮುಂಬೈ ಸೋಲಿಗೆ ಹಲವು ಕಾರಣಗಳಿವೆ. ಆದರೆ ಆಳವಾಗಿ ಯೋಚಿಸಿದರೆ ಮುಖ್ಯವಾಗಿ ಕೆಲವು ಕಾರಣಗಳಿವೆ ಎಂದು ಹೇಳಬಹುದು. ಯಾವುವು ಆ ಕಾರಣ ಎಂದು ನಾವೀಗ ತಿಳಿದುಕೊಳ್ಳೋಣ.

    ಗುಜರಾತಿನ ಅಹಮದಾಬಾದ್ ಪಿಚ್‌ನಲ್ಲಿ ಬ್ಯಾಟಿಂಗ್​ ಉತ್ತಮ ವಾತಾವರಣ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಆರ್ದ್ರತೆಯ ಕಾರಣ ಮುಂಬೈಗೆ ಚೇಸಿಂಗ್ ಸುಲಭ ಎಂದು ಎಲ್ಲರೂ ಭಾವಿಸಿದ್ದರು. ಆದರೆ ತಂಡದ ಆರಂಭಿಕ ಆಟಗಾರ ಇಶಾನ್ ಕಿಶನ್ ಗೋಲ್ಡನ್ ಡಕ್ ಆಗುವ ಮೂಲಕ ಮೊದಲ ಆಘಾತ ನೀಡಿದರು. ಆ ಬಳಿಕ ರೋಹಿತ್ ಶರ್ಮ (43) ಮತ್ತು ನಮನ್ ಧೀರ್ (20) ಉತ್ತಮ ಇನ್ನಿಂಗ್ಸ್ ಮುಂದುವರಿಸಿದರು. ಇವರಿಬ್ಬರ ಜತೆಗೆ ಡೆವಾಲ್ಡ್ ಬ್ರೆವಿಸ್ (46) ಕೂಡ ಉತ್ತಮ ಪ್ರದರ್ಶನ ನೀಡಿದರು. ಆದರೆ, ನಿರ್ಣಾಯಕ ಸಮಯದಲ್ಲಿ ವಿಕೆಟ್​ ಒಪ್ಪಿಸಿದರು. ಕ್ರೀಸ್​ನಲ್ಲಿ ನಿಲ್ಲುವ ಸಮಯ ಬಂದಾಗ ತಿಲಕ್ ವರ್ಮಾ (25) ಕೂಡ ಕೈ ಎತ್ತಿದರು. ಪವರ್​ ಹಿಟ್ಟರ್ ಟಿಮ್ ಡೇವಿಡ್ (11) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (11) ಕೂಡ ತಮ್ಮ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಬೌಲಿಂಗ್​ನಲ್ಲಿ ಅಬ್ಬರಿಸಿದ ಮುಂಬೈ, ಬ್ಯಾಟಿಂಗ್​ನಲ್ಲೂ ಇದೇ ವೇಗವನ್ನು ಮುಂದುವರಿಸಿದ್ದರೆ ಸುಲಭವಾಗಿ ಗೆಲುವು ಸಾಧಿಸುತ್ತಿತ್ತು. ಆದರೆ, ಬ್ಯಾಟ್ಸ್​ಮನ್​ಗಳ ವೈಫಲ್ಯ ತಂಡವನ್ನು ಘಾಸಿಗೊಳಿಸಿತು.

    ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲೇ ಸಂಪೂರ್ಣ ವಿಫಲವಾದರು. ಬ್ಯಾಟರ್ ಮತ್ತು ನಾಯಕನಾಗಿ ಅವರು ಯಾವುದೇ ಪ್ರಭಾವವನ್ನು ಬೀರಲಿಲ್ಲ. ತಂಡದ ಸೋಲಿಗೆ ಅವರ ವೈಫಲ್ಯವೂ ಒಂದು ಪ್ರಮುಖ ಕಾರಣ ಎನ್ನಬಹುದು. ಬೌಲಿಂಗ್‌ನಲ್ಲಿ ಅವರು ಬುಮ್ರಾ ಮತ್ತು ಗೆರಾಲ್ಡ್​ ಕೊಯೆಟ್ಜಿಯಂತಹ ವಿಶ್ವ ದರ್ಜೆಯ ಬೌಲರ್‌ಗಳೊಂದಿಗೆ ಮೊದಲ ಓವರ್​ ಬೌಲ್ ಮಾಡಿದರು. ಬುಮ್ರಾ ಮತ್ತು ಕೊಯೆಟ್ಜಿ 5 ವಿಕೆಟ್ ಪಡೆದರೆ, ಪಾಂಡ್ಯ ಒಂದೇ ಒಂದು ವಿಕೆಟ್ ಪಡೆಯದೆ 3 ಓವರ್‌ಗಳಲ್ಲಿ 30 ರನ್ ನೀಡಿದರು. ಇದಿಷ್ಟೇ ಅಲ್ಲದೆ, ಪವರ್ ಪ್ಲೇನಲ್ಲಿ ತನಗೆ ಇಷ್ಟವಾದವರಿಗೆ ಬೌಲಿಂಗ್ ಅವಕಾಶ ನೀಡುತ್ತಿದ್ದರು. ಫೀಲ್ಡಿಂಗ್​ ಸ್ಥಾನಗಳೂ ಸಹ ಸರಿಯಾಗಿರಲಿಲ್ಲ. ಬ್ಯಾಟಿಂಗ್‌ ವೇಳೆ ಅಗತ್ಯದ ಸಮಯದಲ್ಲಿ ತಾನು ಕ್ರೀಸ್​ಗೆ ಇಳಿಯದೆ ಟಿಮ್ ಡೇವಿಡ್‌ನನ್ನು ಕಳುಹಿಸಿದರು. ಹಾರ್ದಿಕ್, ಸ್ಪಿನ್​ ಬೌಲರ್​ ರಶೀದ್ ಖಾನ್ ಅವರನ್ನು ಸಮರ್ಥವಾಗಿ ಎದುರಿಸಿ ರನ್ ಗಳಿಸಿದ್ದರೆ ಮುಂಬೈಗೆ ಗೆಲುವು ಸುಲಭವಾಗುತ್ತಿತ್ತು. ಸ್ಪಿನ್ ಆಡುವಲ್ಲಿ ದುರ್ಬಲರಾದ ಡೇವಿಡ್ ಅವರನ್ನು ಕಳುಹಿಸಿದರು. ಇತ್ತ ತಿಲಕ್ ಕೂಡ ರಶೀದ್ ಅವರನ್ನು ಎದುರಿಸಲು ಸಾಧ್ಯವಾಗದೆ ವಿಕೆಟ್​ ಒಪ್ಪಿಸಿದರು. ಕೊನೆಯಲ್ಲಿ ಬಂದ ಪಾಂಡ್ಯ ಕೂಡ ಬ್ಯಾಟಿಂಗ್​ನಲ್ಲಿ ಅಬ್ಬರಿಸಲಿಲ್ಲ.

    ಮುಂಬೈ ತಂಡದಲ್ಲಿ ಬುಮ್ರಾ (3/14) ಮತ್ತು ಕೊಯೆಟ್ಜಿ (2/27) ವೈಯಕ್ತಿಕವಾಗಿ ಬೌಲಿಂಗ್‌ನಲ್ಲಿ ಮಿಂಚಿದರು. ರೋಹಿತ್ (43) ಮತ್ತು ಬ್ರೆವಿಸ್ (46) ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಆಡಿದರು. ಆದರೂ ತಂಡ ಸೋಲುಂಡಿತು. ನಾಯಕ ಹಾರ್ದಿಕ್ ಹಾಗೂ ಕೋಚ್ ತಪ್ಪು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಯಾವ ಆಟಗಾರನನ್ನು ಯಾವ ಸ್ಥಾನದಲ್ಲಿ ಕಳುಹಿಸಬೇಕು? ಯಾರೊಂದಿಗೆ ಮತ್ತು ಯಾವಾಗ ಬೌಲಿಂಗ್​ಗೆ ಇಳಿಸಬೇಕು? ಎಂಬ ತಂತ್ರವನ್ನು ಅನುಸರಿಸಲಿಲ್ಲ. ಬೌಲಿಂಗ್​ನಲ್ಲಿ ಪಾಂಡ್ಯ ಪವರ್ ಪ್ಲೇನಲ್ಲಿ ಎರಡು ಓವರ್ ಎಸೆದರು. ಆದರೆ ಬ್ಯಾಟಿಂಗ್‌ನಲ್ಲಿ ಮಾತ್ರ ಕೊನೆಯ ಹಂತದಲ್ಲಿ ಇಳಿದರು. ಪಾಂಡ್ಯ ಅವರು ರಶೀದ್ ಖಾನ್​ ಬೌಲಿಂಗ್‌ಗೆ ಹೆದರುತ್ತಿದ್ದರು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇಕ್ಕಟ್ಟಿನ ಸಂದರ್ಭದಲ್ಲಿ ಟಿಮ್ ಡೇವಿಡ್ ಅವರನ್ನು ಬ್ಯಾಟಿಂಗ್​ಗೆ ಇಳಿಸಿದ್ದು, ತಂಡಕ್ಕೆ ಮೈನಸ್ ಆಗಿ ಪರಿಣಮಿಸಿತು.

    ಉತ್ತಮವಾಗಿ ಆಡುತ್ತಿದ್ದ ರೋಹಿತ್ ಹಾಗೂ ಬ್ರೆವಿಸ್ ಜೋಡಿಯನ್ನು ಹಾಗೆಯೇ ಮುಂದುವರಿಸುವಂತೆ ಸಲಹೆ ನೀಡಬೇಕಿತ್ತು. ಆದರೆ, ಆ ಪ್ರಯತ್ನವನ್ನು ನಾಯಕನಾದ ಹಾರ್ದಿಕ್​ ಪಾಂಡ್ಯ ಮಾಡಲಿಲ್ಲ. ಆಟಗಾರರ ವೈಯಕ್ತಿಕ ಪ್ರದರ್ಶನ ಉತ್ತಮವಾಗಿದ್ದರೂ ಸಹ, ಗುಜರಾತ್ ಆಟಗಾರರಲ್ಲಿ ಕಾಣುತ್ತಿದ್ದ ಉತ್ಸಾಹ ಮತ್ತು ಗೆಲ್ಲುವ ಆಸೆ ಮುಂಬೈ ಆಟಗಾರರಲ್ಲಿ ಇರಲಿಲ್ಲ. ಏಕೆಂದರೆ, ತಂಡದಲ್ಲಿ ಒಮ್ಮತ ಎಂಬುದೇ ಇರಲಿಲ್ಲ. ಹಾರ್ದಿಕ್​ ಪಾಂಡ್ಯ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನವನ್ನು ಮಾಡಲಿಲ್ಲ. ತಂಡದ ಮಿಸ್ಟೇಕ್​ಗಳಿಂದಲೇ ಮುಂಬೈ ತಂಡ ಮೊದಲ ಪಂದ್ಯದಲ್ಲಿ ಗೆಲುವನ್ನು ಕೈಚೆಲ್ಲಿತು. (ಏಜೆನ್ಸೀಸ್​)

    VIDEO | ಮೈದಾನಕ್ಕೆ ನಾಯಿ ಓಡಿಬರುತ್ತಿದ್ದಂತೆ ಮೊಳಗಿತು ‘ಹಾರ್ದಿಕ್..ಹಾರ್ದಿಕ್’ ಕೂಗು! ಶ್ವಾನಕ್ಯಾಕೆ ಹೋಲಿಕೆ?

    SSLC ಪರೀಕ್ಷಾ ದಿನವೇ ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯ

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts