More

    ಕುಸ್ತಿಪಟುಗಳ ಆಕ್ರಂದನ ಆಲಿಸದ ಕೇಂದ್ರ

    ಬಾಗಲಕೋಟೆ: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸಿ ದೇಶದ ಹಿರಿಮೆ ಹೆಚ್ಚಿಸಿದ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ವಾಗ್ದಾಳಿ ಮಾಡಿದರು.

    ಯಾರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಮಹಿಳಾ ಕುಸ್ತಿಪಟುಗಳು ಹೋರಾಟ ಮಾಡಿದರೋ ಆ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಬದಲಿಗೆ ಅದೇ ವ್ಯಕ್ತಿಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್‌ ನೀಡಲಾಗಿದೆ ಎಂದು ಟೀಕಿಸಿದರು.

    ಬೀಳಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಂಚಿನಾಳ ಗ್ರಾಮದ ಶ್ರೀ ಮಲ್ಲಯ್ಯನ ಐದೇಶಿ ನಿಮಿತ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು.

    ಲೈಂಗಿಕ ದೌರ್ಜನ್ಯಕ್ಕೆ ಬೇಸತ್ತ ಕುಸ್ತಿಪಟುಗಳು ತಾವು ಗಳಿಸಿದ ಪದಕಗಳನ್ನು ವಾಪಸ್‌ ಮಾಡಿ ಕಣ್ಣೀರು ಹಾಕಿದರೂ ಕೇಂದ್ರದ ನಾಯಕರ ಮನಸ್ಸು ಕರಗಲಿಲ್ಲ. ಚಿನ್ನದ ಪದಕ ಗಳಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ ಕ್ರೀಡಾಪಟುಗಳು ಅಳಲನ್ನು ಕೇಳಲಿಲ್ಲ. ಆರೋಪಕ್ಕೆ ಗುರಿಯಾದ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳುವ ಬದಲಿಗೆ ಪುರಸ್ಕರಿಸುವ ರೀತಿ ನಡೆದುಕೊಳ್ಳಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

    ಮಣಿಪುರ ಹಿಂಸಾಚಾರದ ಬಗ್ಗೆಯೂ ಪ್ರಧಾನಿಗಳು ಮಾತನಾಡಲಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದವು. ಹಿಂಸಾಚಾರ ನಡೆಯಿತು. ಆದರೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಘಟನೆಯ ಬಗ್ಗೆ ತುಟಿ ಬಿಚ್ಚಲಿಲ್ಲ. ಸಂಸತ್ತಿನಲ್ಲಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷದ ಮುಖಂಡರು ಒತ್ತಾಯಿಸಿದರೂ ಮಾತನಾಡಲಿಲ್ಲ ಎಂದರು.

    ಮಹಿಳೆಯರ ಬಗ್ಗೆ ನೈಜ ಕಳಕಳಿ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ. ರಾಜ್ಯದಲ್ಲಿ ಇದೇ ಕಾರಣಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನಕ್ಕೆ ತರಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಇನ್ನೂ ಹಲವು ಯೋಜನೆಗಳನ್ನು ಜಾರಿಗೆ ತರುವ ಗ್ಯಾರಂಟಿ ನೀಡಲಾಗಿದೆ ಎಂದರು.

    ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಈ ಕಾರಣಕ್ಕಾಗಿಯೇ ಬಡಕುಟುಂಬಗಳಿಗೆ ನೆರವಾಗಲು ರಾಜ್ಯ ಸರ್ಕಾರ, ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ತಿಂಗಳು ಎರಡು ಸಾವಿರ ರೂ. ಕುಟುಂಬದ ಯಜಮಾನಿ ಖಾತೆಗೆ ಜಮಾ ಆಗುತ್ತಿದೆ.  ಅನ್ನಭಾಗ್ಯ ಯೋಜನೆಯಲ್ಲಿ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ೨೦೦ ಯೂನಿಟ್‌ ಉಚಿತವಾಗಿ ವಿದ್ಯುತ್‌ ಕೊಡಲಾಗುತ್ತಿದೆ. ಈ ಯೋಜನೆಗಳು ಬಡಕುಟುಂಬಗಳ ಹೊರೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಿವೆ ಎಂದರು.

    ಕೇಂದ್ರದಲ್ಲೂ ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬದ ಮಹಿಳೆಗೆ ಒಂದು ಲಕ್ಷ ರೂ. ನೀಡಲಾಗುವುದು. ಮಹಿಳೆಯರು ತಮ್ಮ ಕಾನೂನು ಹಕ್ಕುಗಳನ್ನು ಪಡೆಯಲು ಹಾಗೂ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಪ್ರತಿ ಪಂಚಾಯತ್‌ನಲ್ಲಿ ಅಧಿಕಾರ ಮೈತ್ರಿ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿದರು.

    ಸರ್ಕಾರಿ ಉದ್ಯೋಗಗಳಲ್ಲಿಗುತ್ತಿಗೆ ಆಧಾರಿತ ಪದ್ಧತಿಯನ್ನು ತೆಗೆದು ಹಾಕಿ ಕಾಯಂ ಉದ್ಯೋಗಿಗಳಿಗೆ ಅವಕಾಶ ನೀಡಲಾಗುವುದು. ಅಸಂಘಟಿತ ಕಾರ್ಮಿಕರಿಗೆ  ಜೀವವಿಮೆ ಮತ್ತು ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಕೇಂದ್ರ ಸರ್ಕಾರದ ಅನುದಾನವನ್ನು ದುಪ್ಪಟ್ಟು ಮಾಡುವ ಮೂಲಕ  ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿನ ವೇತನ ನೀಡಲಾಗುವುದು ಎಂದು ವಿವರಿಸಿದರು.

    ಈ ಸಂದರ್ಭದಲ್ಲಿ ಮಹಿಳೆಯರು ಸಂಯುಕ್ತ ಪಾಟೀಲ ಅವರಿಗೆ ಉಡಿತುಂಬಿ ಶುಭ ಕೋರಿದರು. ಯುವತಿಯರು ಸೆಲ್ಫಿ ತೆಗೆದುಕೊಂಡರು.ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತ ಕಾಖಂಡಕಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಚಿದಾನಂದ ನಂದ್ಯಾಳ್‌ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts