More

    ಬರಗೇರಮ್ಮ-ತಿಪ್ಪಿನಘಟ್ಟಮ್ಮ ಐತಿಹಾಸಿಕ ಭೇಟಿ ಮೇ 7ಕ್ಕೆ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲೇ ಅತ್ಯಂತ ಮಹತ್ವವುಳ್ಳ ಮಹೋತ್ಸವವಾದ ಐತಿಹಾಸಿಕ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ. ಸಂಪ್ರದಾಯದಂತೆ ರಾಜಬೀದಿ ದೊಡ್ಡಪೇಟೆಯಲ್ಲಿ ಮೇ 7ರಂದು ಅಕ್ಕ-ತಂಗಿಯರು ಮುಖಾಮುಖಿಯಾಗಲಿದ್ದಾರೆ. ಇದರ ಅಂಗವಾಗಿ ಸೋಮವಾರ ಕೂಡ ಸಿದ್ಧತೆಗಳು ಭರದಿಂದ ಸಾಗಿತು.

    ಅಕ್ಕ ಬರಗೇರಮ್ಮ, ತಂಗಿ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ಇಲ್ಲಿನ ನವದುರ್ಗಿಯರಲ್ಲಿ ಪ್ರಮುಖ ಶಕ್ತಿದೇವತೆಗಳು. ದೇವಿಯರಿಬ್ಬರೂ ನಿಗದಿತ ಸ್ಥಳದಲ್ಲಿ ವರ್ಷಕ್ಕೊಮ್ಮೆ ಮಾತ್ರ ಭೇಟಿಯಾಗುವುದು ಶತಮಾನಗಳಿಂದಲೂ ಆಚರಣೆಯಲ್ಲಿರುವ ವಿಶಿಷ್ಟ ಮಹೋತ್ಸವ.

    ಕೋಟೆನಗರಿ ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.

    ದೊಡ್ಡಪೇಟೆಯ ಖಾಸಗಿ ಹೋಟೆಲ್‌ವೊಂದರ ಮುಂಭಾಗದಿಂದ ಬಸವ ದೇವರ ಗುಡಿ ಮಾರ್ಗದುದ್ದಕ್ಕೂ ಎರಡೂ ಬದಿಯ ಪಕ್ಕದಲ್ಲಿ ಮುಂಚಿತವಾಗಿಯೇ ಕಂಬಗಳನ್ನು ಹಾಕಲಾಗುತ್ತಿದೆ.

    ಮಹೋತ್ಸವಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ಭೇಟಿ ಉತ್ಸವ ಸಮಿತಿ ಕಲ್ಪಿಸಲು ಮುಂದಾಗಿದೆ. ಜೊತೆಗೆ ಪ್ರತಿ ವರ್ಷದಂತೆ ನಗರಸಭೆಯ ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ, ನೀರಿನ ಸೌಕರ್ಯ, ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

    ಮಹೋತ್ಸವ ನಡೆಯುವ ಸ್ಥಳದಲ್ಲಿ ಅತ್ಯಾಕರ್ಷಕ ಅಲಂಕಾರ ಸೇವೆಯೂ ಮಂಗಳವಾರದಂದು ನಡೆಯಲಿದೆ. ಅಕ್ಕ-ತಂಗಿಯರಿಬ್ಬರು ಭೇಟಿಯಾಗುವ ಸ್ಥಳದಲ್ಲಿ ‘ಓಂ’ ಚಿಹ್ನೆ ಆಕಾರದಲ್ಲಿ ಪುಷ್ಪಗಳಿಂದ ಈ ಬಾರಿಯೂ ವಿಶೇಷವಾಗಿ ಸಿಂಗರಿಸಲು ತೀರ್ಮಾನಿಸಲಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಸಂಜೆ ಸೂರ್ಯಸ್ತ ಆದೊಡನೆ ದೊಡ್ಡಪೇಟೆಗೆ ಭಕ್ತರ ದಂಡೆ ಹರಿದು ಬರಲಿದೆ.

    ಟ್ರಾಫಿಕ್ ಕಿರಿಕಿರಿ ಉಂಟಾಗುವುದನ್ನು ತಡೆಯಲು ವಾಹನಗಳು ಈ ಮಾರ್ಗವಾಗಿ ಸಂಚರಿಸದಂತೆ ರಂಗಯ್ಯನ ಬಾಗಿಲು ಸಮೀಪವಿರುವ ಗಣಪತಿ ದೇಗುಲದ ಮುಂಭಾಗದಿಂದ, ಮತ್ತೊಂದೆಡೆ ಉಯ್ಯಲೆ ಕಂಬದಿಂದ ಪೊಲೀಸ್ ಬ್ಯಾರಿಕೇಡ್‌ಗಳನ್ನು ಕೂಡ ಹಾಕಲಾಗುತ್ತದೆ. ರಾತ್ರಿ 8.30ರಿಂದ 9.30ರ ಒಳಗೆ ಭೇಟಿ ನಡೆಯಲಿದ್ದು, ಎರಡ್ಮೂರು ನಿಮಿಷದೊಳಗೆ ನಡೆಯುವ ಮಹೋತ್ಸವಕ್ಕಾಗಿ ಮೂರು ತಾಸು ಭಕ್ತಗಣ ಕಾದು ಭಕ್ತಿ ಸಮರ್ಪಿಸಲಿದ್ದಾರೆ.

    ಬರಗೇರಮ್ಮನಿಗೆ ದೊಡ್ಡಭಂಡಾರದ ಪೂಜೆ: ಬರಗೇರಮ್ಮ ದೇವಿಗೆ ಜಾತ್ರಾ ಮಹೋತ್ಸವದ ಪದ್ಧತಿಯಂತೆ ಸೋಮವಾರ ಬೆಳಗ್ಗೆ 9ಕ್ಕೆ ಹತ್ತಾರು ಕೆ.ಜಿ. ಅರಿಶಿಣದಿಂದ ದೊಡ್ಡಭಂಡಾರದ ವಿಶೇಷ ಪೂಜೆ, ನಂತರ ಮಹಾಮಂಗಳಾರತಿ ನೆರವೇರಿತು. ರಾತ್ರಿ 9ಕ್ಕೆ ಓಕಳಿ ಸೇವೆ ಶ್ರದ್ಧಾಭಕ್ತಿಯಿಂದ ಜರುಗಿತು. ಬುರುಜನಹಟ್ಟಿ ಪ್ರವೇಶದ ನಂತರ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ ಹಾಗೂ ತಿಪ್ಪಿನಘಟ್ಟಮ್ಮ ದೇವಿಗೆ ಕೆಳಗೋಟೆ, ಬಾರ್‌ಲೈನ್ ರಸ್ತೆ ಸೇರಿ ವಿವಿಧೆಡೆ ಭಕ್ತರಿಂದ ಮಹಾಮಂಗಳಾರತಿ ಪೂಜೆ ಸ್ವೀಕಾರ ನೆರವೇರಿದವು.

    ಇಂದು ಎಲ್ಲೆಲ್ಲಿ ಪೂಜೆ: ಬರಗೇರಮ್ಮ ದೇವಿಗೆ ಚಿಕ್ಕಪೇಟೆ, ಐಯ್ಯಣ್ಣನಪೇಟೆ, ದೊಡ್ಡಪೇಟೆ, ಉತ್ಸವಾಂಬ ದೇಗುಲದ ಅಕ್ಕಪಕ್ಕ, ಕರುವಿನಕಟ್ಟೆ ವೃತ್ತ, ಬುರುಜನಹಟ್ಟಿ ರಸ್ತೆಯಲ್ಲಿನ ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರವೂ ಬೆಳಗ್ಗೆ 6ರಿಂದ ಆರಂಭವಾಗಿ ಸಂಜೆ 6ರವರೆಗೆ ನೆರವೇರಲಿದೆ. ನಂತರ ಒಳಗಿನ ದೇಗುಲಕ್ಕೆ ಉತ್ಸವ ಮೂರ್ತಿಯನ್ನು ಕರೆತರುವುದು.

    ತಿಪ್ಪಿನಘಟ್ಟಮ್ಮ ದೇವಿಗೂ ವಿವಿಧ ಭಕ್ತರ ಮನೆಗಳಲ್ಲಿ ಮಂಗಳಾರತಿ ಪೂಜೆ ಸ್ವೀಕಾರ ನಡೆಯಲಿದೆ. ಶಕ್ತಿದೇವತೆಗಳ ಉತ್ಸವ ಮೂರ್ತಿಗಳು ಪುಷ್ಪಾಲಂಕೃತಗೊಂಡ ನಂತರ ದೇವತೆಗಳನ್ನು ಹೊತ್ತ ಅರ್ಚಕರು ಉತ್ಸವದ ಸ್ಥಳದತ್ತ ಹೆಜ್ಜೆ ಹಾಕಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts