ಕ್ಯಾಪ್ಟನ್​​... ಹಿಟ್​ಮ್ಯಾನ್​ ಸರಣಿಯ ಅಂತಿಮ ಪಂದ್ಯ ಆಡದಿರುವ ಕುರಿತು Jasprit Bumrah ನೀಡಿದ ಕಾರಣ ಹೀಗಿದೆ

Rohit Bumrah
Published on

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಐದನೇ ಪಂದ್ಯದಲ್ಲಿ ಪ್ರವಾಸಿ ತಂಡವು ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಲಂಚ್​ ಬ್ರೇಕ್​ ವೇಳೆಗೆ 3 ವಿಕೆಟ್​ ನಷ್ಟಕ್ಕೆ 64 ರನ್​ಗಳಿಸಿದೆ. ಇನ್ನೂ ಸರಣಿಯ ಅಂತಿಮ ಪಂದ್ಯಕ್ಕೆ ಸಂಬಂಧಿಸಿದಂತೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ರೋಹಿತ್​ ಶರ್ಮ, ಆಕಾಶ್​ದೀಪ್​ ಬದಲಾಗಿ ಶುಭಮನ್​ ಗಿಲ್​ ಹಾಗೂ ಪ್ರಸಿದ್ಧ್​​ ಕೃಷ್ಣಗೆ ಸ್ಥಾನ ನೀಡಲಾಗಿದೆ. ಜಸ್ಪ್ರೀತ್​ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇನ್ನೂ ಸರಣಿಯ ಅಂತಿಮ ಪಂದ್ಯದಲ್ಲಿ ರೋಹಿತ್​ ಶರ್ಮರನ್ನು (Rohit Sharma) ತಂಡದಿಂದ ಕೈ ಬಿಡಲಾಗಿದ್ದು, ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಈ ಮೊದಲು ರೋಹಿತ್​ ಶರ್ಮಗೆ ತಂಡದಲ್ಲಿ ಸ್ಥಾನ ಸಿಗುವುದು ಡೌಟ್​ ಎಂದು ಹೇಳಲಾಗಿತ್ತು. ಆದರೆ, ಅಂತಿಮ ಕ್ಷಣದವರೆಗೂ ಯಾವುದು ಅಧಿಕೃತವಾಗಿರಲಿಲ್ಲ. ಹೀಗಾಗಿ ರೋಹಿತ್​ ಶರ್ಮ ಸರಣಿಯ ಅಂತಿಮ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗಿತ್ತು.

Rohit Sharma

ಈ ಬಗ್ಗೆ ಮಾತನಾಡಿರುವ ನಾಯಕ ಜಸ್ಪ್ರೀತ್​ ಬುಮ್ರಾ (Jasprit Bumrah) ಹಿಟ್​ಮ್ಯಾನ್​ ಸರಣಿಯ ಕೊನೆ ಪಂದ್ಯವನ್ನು ಯಾಕೆ ಆಡುತ್ತಿಲ್ಲ ಎಂಬುದರ ಬಗ್ಗೆ ವಿವರಿಸಿದ್ದಾರೆ. ನಮ್ಮ ಕ್ಯಾಪ್ಟನ್​ ನಾಯಕತ್ವದ ಗುಣಗಳನ್ನು ತೋರಿಸಿದ್ದು, ಸ್ವತಃ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳುವ ಮೂಲಕ ಎದ್ದಿರುವ ಊಹಾಪೋಹಗಳಿಗೆ ಜಸ್ಪ್ರೀತ್​ ಬುಮ್ರಾ (Jasprit Bumrah) ತೆರೆ ಎಳೆಯುವ ಕೆಲಸ ಮಾಡಿದ್ದಾರೆ.

ಪಿತೃತ್ವದ ರಜೆ ಹಿನ್ನೆಲೆ ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯಕ್ಕೆ ರೋಹಿತ್​ ಶರ್ಮ (Rohit Sharma) ಗೈರಾಗಿದ್ದರು. ರೋಹಿತ್​ ಅನುಪಸ್ಥಿತಿಯಲ್ಲಿ ಜಸ್ಪ್ರೀತ್​ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಭಾರತ 295 ರನ್​ಗಳ ಭರ್ಜರಿ ಜಯ ಗಳಿಸಿತ್ತು. ಸರಣಿಯ ಎರಡನೇ ಪಂದ್ಯದಿಂದ ತಂಡವನ್ನು ಮುನ್ನಡೆಸಿದ ಹಿಟ್​ಮ್ಯಾನ್​ ಪ್ರಸ್ತುತ ಸರಣಿಯಲ್ಲಿ 31ರನ್​ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಸರಣಿಯ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ತಂಡವಿದ್ದು, ಏನೆಲ್ಲಾ ಆಗಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net