

ಹಾಸನ: ಮುಂದಿನ ದಿನಗಳಲ್ಲಿ ನಾನು ಮತ್ತು ಪ್ರಜ್ವಲ್ ಹಾಸನ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಹೇಳಿದ್ದಾರೆ.
ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸೂರಜ್ ರೇವಣ್ಣ (Suraj Revanna), ಸೂರ್ಯ ಹುಟ್ಟೋದು ಮಾತ್ರವಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ ಅನ್ನೋದು ನೆನಪಿರಲಿ. ನಿಮ್ಮ ಪ್ರಜ್ವಲ್ ಹಾಗೂ ಸೂರಜ್ ಕೂಡ ಅಷ್ಟೇ. ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡುತ್ತೇವೆ.
ಕೆಲವು ಅಧಿಕಾರಿಗಳು ಹಾಗೂ ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡುತ್ತಿದ್ದಾರೆ ಅನ್ನೋದನ್ನ ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಯಾವುದೂ ಕೂಡ ಶಾಶ್ವತವಲ್ಲ, ಯಾವ ಸರ್ಕಾರ ಕೂಡ ಶಾಶ್ವತವಲ್ಲ. ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂಥೆಂತವರು ಏನೇನ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಗುಡುಗಿದ್ದಾರೆ.
ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತದೆ. ದ್ವೇಷ ರಾಜಕಾರಣ ಒಳ್ಳೆಯದಲ್ಲ. ಜನ ನಿಮಗೆ 135 ಸೀಟು ಕೊಟ್ಟಿರೋದು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಅಂತಾ. ಅದರ ಬದಲಾಗಿ ನೀವುಗಳು ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬನ ಹೇಗೆ ಮುಗಿಸೋದು ಎಂಬುದು ಯೋಚನೆ ಮಾಡುತ್ತೀರಿ ಎಂದು ಕಿಡಿಕಾರಿದ್ದಾರೆ.
ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಇವತ್ತು ಆವರಿಸಿಕೊಂಡಿದೆ. ನಿಮ್ಮ ಸೂರಜ್ ರೇವಣ್ಣನ ಮೂಲಕ ಸೂರ್ಯ ಮತ್ತೆ ಹುಟ್ಟೇ ಹುಟ್ಟುತ್ತಾನೆ. ಈ ದ್ವೇಷದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇದೆ ಅಂತಾ ಕುಣಿಯುತ್ತಿದ್ದಾರೆ. ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಹರಿಹಾಯ್ದಿದ್ದಾರೆ.