

ಮುಂಬೈ: 2024ರಲ್ಲಿ ಸಖತ್ ಸೌಂಡ್ ಮಾಡಿದ್ದ ಜಸ್ಟಿಸ್ ಹೇಮಾ ಸಮಿತಿ ವರದಿ ಕೇರಳ ಸರ್ಕಾರಕ್ಕೆ ಸಲ್ಲಿಕೆಯಾದ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಮಾಲಿವುಡ್ ಮಾತ್ರವಲ್ಲದೇ ಬೇರೆ ಚಿತ್ರರಂಗದ ನಟಿಯರು (Actress) ತಾವು ಅನುಭವಿಸಿದ್ದ ಕಿರುಕುಳ ಬಗ್ಗೆ ಧ್ವನಿ ಎತ್ತಿದ್ದರು. ಇದೀಗ ಬಾಲಿವುಡ್ನ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟಿ ಉಪಾಸನಾ ಸಿಂಗ್ (Actress Upasana) ಸೌತ್ ಸಿನಿ ಇಂಡಸ್ಟ್ರಿಯ ನಿರ್ದೇಶಕರೊಬ್ಬರು ತಮ್ಮ ಜೊತೆ ನಡೆದುಕೊಂಡ ರೀತಿಯನ್ನು ವಿವರಿಸಿದ್ದು, ಸದ್ಯ ವೈರಲ್ ಆಗುತ್ತಿದೆ.
ಸಿದ್ಧಾರ್ಥ್ ಕಾನನ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ಉಪಾಸನಾ (Actress Upasana), ಅನಿಲ್ ಕಪೂರ್ ನಾಯಕರಾಗಿ ನಟಿಸುತ್ತಿದ್ದ ಸಿನಿಮಾಗೆ ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಿರ್ದೇಶಕರೊಬ್ಬರು ನನ್ನನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ನಾನು ನಿರ್ದೇಶಕರ ಕಚೇರಿಗೆ ಭೇಟಿ ನೀಡಿದಾಗಲೆಲ್ಲ ನನ್ನ ತಾಯಿ ಅಥವಾ ಸಹೋದರಿಯನ್ನು ಕರೆದುಕೊಂಡು ಹೋಗುತ್ತಿದ್ದೆ. ಆ ಬಳಿಕ ಮುಂದೊಂದು ದಿನ ರಾತ್ರಿ 11:30ಕ್ಕೆ ಕರೆ ಮಾಡಿ ಮಾತನಾಡುವುದಿದೆ ಎಂದು ಹೋಟೆಲ್ಗೆ ಬನ್ನಿ ಎಂದು ಹೇಳಿದ್ದರು. ನನ್ನ ಬಳಿ ಕಾರಿಲ್ಲದ ಕಾರಣ ಬರಲು ಸಾಧ್ಯವಿಲ್ಲ. ನಾಳೆ ಬೆಳಗ್ಗೆ ಭೇಟಿ ಮಾಡುತ್ತೇನೆ ಎಂದು ಹೇಳಿದ್ದೆ.
ಆ ಬಳಿಕ ನಿರ್ದೇಶಕರು ನಾನು ಹೇಳಿದ್ದು, ಕಥೆಯ ವಿಚಾರಕ್ಕೆ ಮಾತನಾಡುವುದಲ್ಲ. ಬದಲಿಗೆ ಇದು ಬೇರೆ ರೀತಿಯ ಸಿಟ್ಟಿಂಗ್ ಎಂದು ಹೇಳಿದರು. ನಾನು ಇದಕ್ಕೆ ಒಪ್ಪಲಿಲ್ಲ. ಮಾರನೆಯ ದಿನ ಬೆಳಗ್ಗೆ ಬಾಂದ್ರಾದಲ್ಲಿರುವ ಅವರ ಕಚೇರಿಗೆ ಹೋಗಿ ಪಂಜಾಬಿಯಲ್ಲಿ ಬೈದು ಬಂದೆ. ನಾನು ಜನರ ಬಳಿ ಅನಿಲ್ ಕಪೂರ್ರೊಂದಿಗೆ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದೆ. ಆ ಬಳಿಕ ಈ ವಿಚಾರ ನನ್ನ ತಲೆಗೆ ಬಂದಿತು. ಮನಸ್ಸಿಗೆ ತುಂಬಾ ಬೇಜಾರಾಗಿ ಏಳು ದಿನಗಳ ಕಾಲ ರೂಮಿನಿಂದ ಹೊರಬಂದಿರಲಿಲ್ಲ. ನನ್ನ ತಾಯಿ ತುಂಬಾ ಸಪೋರ್ಟ್ ಮಾಡಿದರು. ಈ ಕಾರಣಕ್ಕೆ ನಾನು ಚಿತ್ರರಂಗವನ್ನು ಬಿಡದೆ ಇರಲು ನಿರ್ದರಿಸಿದೆ ಎಂದು ನಟಿ ಉಪಾಸನಾ (Actress Upasana) ಹೇಳಿದ್ದಾರೆ.