0, 8, 13, 17.... ಕಳಪೆ ಪ್ರದರ್ಶನಕ್ಕೆ ರೋಹಿತ್ ಶರ್ಮ ಗುರಿ! 'ಹಿಟ್​' ಕೊಡದ 'ಮ್ಯಾನ್'​ ಕುರಿತು ಕೋಚ್​ ಮೌನ | Rohit Sharma

ವಿಜಯವಾಣಿ - 2025-04-08T180517.576
Published on

Rohit Sharma: ಏ.07ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು ನಡುವಿನ ರೋಚಕ ಪಂದ್ಯದಲ್ಲಿ 12 ರನ್​ಗಳಿಂದ ಆರ್​ಸಿಬಿ ಗೆದ್ದು ಬೀಗಿತು. ಒಂದು ತಂಡಕ್ಕೆ ಸಂತಸ ತುಂಬಿ ಹೋದರೆ, ಮತ್ತೊಂದು ತಂಡಕ್ಕೆ ಸತತ ಸೋಲಿನ ಕಹಿ ಅತೀವ ಬೇಸರವನ್ನು ತಂದೊಡ್ಡಿತು. ಕೆಲವೇ ಕೆಲವು ರನ್​ಗಳಿಂದ ಪಂದ್ಯ ಕಳೆದುಕೊಂಡ ಎಂಐ, ತನ್ನ ತವರಿನಲ್ಲೇ ಸೋತಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು.

ಹಾರ್ದಿಕ್ ಬೇಸರ ನುಡಿ

ಇನ್ನು ಪಂದ್ಯ ಸೋಲಿನ ಬಳಿಕ ಮಾತನಾಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, "ಆರ್​ಸಿಬಿ ವಿರುದ್ಧ ತಿಲಕ್ ವರ್ಮಾ ಚೆನ್ನಾಗಿ ಆಡಿದರು. ಕಳೆದ ಪಂದ್ಯದಲ್ಲಿ ಹಲವು ವಿಷಯಗಳು ನಡೆದವು. ಆದರೆ, ಹೊರಗಿನ ಜನರಿಗೆ ಒಳಗೆ ಏನೂ ನಡೆದಿದೆ ಎಂಬುದು ತಿಳಿದಿಲ್ಲ. ಲಖನೌ ಪಂದ್ಯದ ಹಿಂದಿನ ದಿನ ತಿಲಕ್‌ಗೆ ಚೆಂಡು ಬಲವಾಗಿ ತಗುಲಿತು. ಅವರನ್ನು ರಿಟೈರ್ಡ್​ ಔಟ್​ ಎಂದು ಘೋಷಿಸುವುದರ ಹಿಂದೆ ಒಂದು ತಂತ್ರವಿತ್ತು. ಅಲ್ಲದೆ, ತಿಲಕ್ ಅವರ ಬೆರಳಿಗೆ ಗಾಯವಾಗಿದ್ದು ನಿಜ. ಗಾಯದಿಂದಾಗಿ ಅವರು ಆಕ್ರಮಣಕಾರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಕೋಚ್ ನಿರ್ಧಾರದ ಪ್ರಕಾರ, ತಿಲಕ್​ರನ್ನು ಕರೆಸಿ ಹೊಸ ಬ್ಯಾಟರ್‌ನೊಂದಿಗೆ ದಾಳಿ ಮಾಡುವುದು ನಮ್ಮ ಯೋಜನೆಯಾಗಿತ್ತು. ಇದೀಗ ಚೇತರಿಸಿಕೊಂಡಿರುವ ತಿಲಕ್ ಆರ್​ಸಿಬಿ ಅದ್ಭುತವಾಗಿ ಆಡಿದರು" ಎಂದು ಸ್ಪಷ್ಟಪಡಿಸಿದರು.

ಹಿಟ್​ಮ್ಯಾನ್ ಕಳಪೆ ಪ್ರದರ್ಶನ

ಐಪಿಎಲ್​ 18ನೇ ಆವೃತ್ತಿ ಆರಂಭದ ಪಂದ್ಯದಿಂದ ನಿನ್ನೆಯ ಆರ್​ಸಿಬಿ ವಿರುದ್ಧದ ಮ್ಯಾಚ್​ನವರೆಗೂ ಮುಂಬೈ ಪರ ಓಪನಿಂಗ್ ಬರುತ್ತಿರುವ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್​, ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮ, ಸತತವಾಗಿ ಕಳಪೆ ಪ್ರದರ್ಶನ ತೋರಿದ್ದಾರೆ. ಇದು ಅಭಿಮಾನಿಗಳು ಮತ್ತು ತಂಡದ ಕೋಚ್​ ಮಹೇಲ ಜಯವರ್ಧನೆ ಅವರನ್ನು ಗೊಂದಲಕ್ಕೆ ದೂಡಿದೆ. ಈ ಕುರಿತಂತೆ ಕಡೆಗೂ ಮೌನ ಮುರಿದ ಕೋಚ್​, "ಬಾಲಿಂಗ್​ ಮತ್ತು ಬ್ಯಾಟಿಂಗ್‌ನಲ್ಲಿ ಪವರ್‌ಪ್ಲೇ ನಮಗೆ ಒಂದು ಕಳವಳಕಾರಿ ವಿಷಯವಾಗಿದೆ. ಕಳೆದ ಕೆಲವು ಪಂದ್ಯಗಳ ಪವರ್‌ಪ್ಲೇನಲ್ಲಿ ನಾವು ಬೌಲಿಂಗ್​ನಲ್ಲಿ ಹೆಚ್ಚು ರನ್‌ಗಳನ್ನು ಕೊಟ್ಟಿದ್ದೇವೆ. ಓಪನಿಂಗ್​ನಲ್ಲಿ ಉತ್ತಮ ಆರಂಭ ಸಿಕ್ಕಿಲ್ಲ. ಎಂದಿನಂತೆ ಪವರ್​ಪ್ಲೇಯಲ್ಲಿ ಹೆಚ್ಚುವರಿ ರನ್​ ಬರಲಿಲ್ಲ. ಇದು ನಮಗೆ ನೋವುಂಟು ಮಾಡಿತು" ಎಂದು ಬೇಸರ ವ್ಯಕ್ತಪಡಿಸಿದರು.

"ಹೌದು, ಪ್ರಸ್ತುತ ರೋಹಿತ್ ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಮೈದಾನದಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ರೋಹಿತ್ ಒಬ್ಬ ಉತ್ತಮ ಅನುಭವಿ ಆಟಗಾರ. ಒಳ್ಳೆಯ ಶಾಟ್​​ಗಳನ್ನೇ ಆಡಲು ಪ್ರಯತ್ನಿಸಿದರು. ಆದರೆ, ಆರ್​ಸಿಬಿಯಲ್ಲಿ ಯಶ್​ ದಯಾಳ್​ ಚೆನ್ನಾಗಿ ಬೌಲಿಂಗ್​ ಮಾಡಿ, ನಮ್ಮನ್ನು ಕಟ್ಟಿಹಾಕಿದರು" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net