

Priyanka Jawalkar: ತೆಲುಗು ಚಿತ್ರಗಳಲ್ಲಿ ತನ್ನದೇ ಅಭಿಮಾನಿ ಬಳಗ ಮತ್ತು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ನಟಿ ಪ್ರಿಯಾಂಕಾ ಜವಾಲ್ಕರ್, ವೃತ್ತಿಯಲ್ಲಿ ತಮಗಾದ ಅನುಭವ, ಕೆಲವು ಘಟನೆಗಳ ಕುರಿತು ಇತ್ತೀಚಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ತೆಲುಗು ಅಂಗಳದಲ್ಲಿ ತೆರೆಕಂಡು, ಬಾಕ್ಸ್ ಆಫೀಸ್ನಲ್ಲಿ ಸೂಪರ್ಹಿಟ್ ಆದ 'ಮ್ಯಾಡ್ ಸ್ಕ್ವೇರ್' ಚಿತ್ರದಲ್ಲಿ ನಟಿಸಿರುವ ಪ್ರಿಯಾಂಕಾ, ಈ ಸಿನಿಮಾದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ, ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ನಟಿ, ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. "ಮೊದಲು ನಾನು 'ಟ್ಯಾಕ್ಸಿವಾಲಾ' ಚಿತ್ರಕ್ಕೆ ಸಹಿ ಹಾಕಿದೆ. ಈ ಚಿತ್ರಕ್ಕಾಗಿ ನಟನಾ ಕೌಶಲ್ಯ ತಿಳಿಸಿಕೊಡುವ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾಗ, 'ಕಲಾ ವರಮ್ ಆಯೆ' ಚಿತ್ರ ತಂಡ ನನ್ನನ್ನು ಸಂಪರ್ಕಿಸಿತು. ಆದರೆ, ಅಲ್ಲಿ ಎಡವಟ್ಟು ಆಯಿತು" ಎಂದರು.
"ಈಗಾಗಲೇ ಒಬ್ಬರು ನಾಯಕಿಯನ್ನು ಆಯ್ಕೆ ಮಾಡಿಕೊಂಡಿದ್ದ ಈ ತಂಡ, ಚಿತ್ರೀಕರಣ ಕೂಡ ಮುಗಿಸಿತ್ತು. ಆದ್ರೆ, ಅವರಿಗೆ ತೃಪ್ತಿ ಇರಲಿಲ್ಲ. ಕಡೆಗೆ ನನ್ನನ್ನು ಸಂಪರ್ಕಿಸಿ, ನಟಿಸುವಂತೆ ಕೇಳಿದರು. ಇಲ್ಲಿ ನನಗೆ ಸಂಭಾವನೆ ನೀಡಲು ಸಹ ಅವರ ಬಳಿ ಬಜೆಟ್ ಇರಲಿಲ್ಲ. ಹೀಗಾಗಿ ನಾನು ಹೆಚ್ಚೇನು ಮಾತನಾಡಲಿಲ್ಲ. ಆದ್ರೆ, ನನ್ನ ಕೆಲವು ಸ್ನೇಹಿತರು ನಾವು ಮಾಡುವ ಕೆಲಸಕ್ಕೆ ಸ್ವಲ್ಪ ಮಟ್ಟಿಗಾದರೂ ಸಂಭಾವನೆ ಪಡೆಯಬೇಕು ಎಂದು ಹೇಳಿದರು. ಬಳಿಕ 10 ಸಾವಿರ ರೂ. ಸಂಬಳ ಕೇಳಿದೆ" ಎಂದರು.
"ಪ್ರಸ್ತುತ ಹಣವೆಲ್ಲ ಖರ್ಚಾಗಿದೆ. ಈಗ ಉಳಿದಿರುವುದು ಅಲ್ಪ-ಸ್ವಲ್ಪ ಎಂದರು. ಒಂದಷ್ಟು ಮಾತುಕತೆಯೆ ಬಳಿಕ ನನ್ನ ಸಂಭಾವನೆ 6 ಸಾವಿರ ರೂ.ಗೆ ಫಿಕ್ಸ್ ಆಯಿತು. ಹಾಗಾಗಿ, ನನ್ನ ಮೊದಲ ಚಿತ್ರಕ್ಕೆ 6 ಸಾವಿರ ರೂ. ಸಂಭಾವನೆ ಪಡೆದೆ. ನಂತರ ಜಾಹೀರಾತಿಗೆ 10 ಸಾವಿರ ರೂ. ತೆಗೆದುಕೊಂಡೆ. ಆ ನಂತರ ಕಥೆ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಮಾಡಬೇಕೆಂಬ ನಿಯಮ ಹಾಕಿಕೊಂಡೆ. ಅದಕ್ಕಾಗಿಯೇ 'ಗಮನಂ' ಚಿತ್ರದ ನಂತರ ಮೂರು ವರ್ಷಗಳ ಅಂತರವಿತ್ತು" ಎಂದಿದ್ದಾರೆ.
"'ಟಿಲ್ಲು ಸ್ಕ್ವೇರ್'ನಲ್ಲಿ ನಾನು 15 ಸೆಕೆಂಡುಗಳು ಮಾತ್ರ ಕಾಣಿಸಿಕೊಳ್ಳುವ ಪಾತ್ರ ಮಾಡಿದ್ದೇನೆ. ಆದರೆ, ಈ ಮಧ್ಯೆ ಒಂದಷ್ಟು ಬೇಸರಗಳು ಕೂಡ ಆಗಿವೆ. ತೆಲುಗು ಮತ್ತು ತಮಿಳಿನ ಎರಡು ದೊಡ್ಡ ಪ್ರಾಜೆಕ್ಟ್ ಮತ್ತು ಕೊನೆಯ ಕ್ಷಣದಲ್ಲಿ ಒಂದು ತಮಿಳು ಸಿನಿಮಾದಿಂದ ನನ್ನನ್ನು ಕೈಬಿಡಲಾಯಿತು" ಎಂದು ಪ್ರಿಯಾಂಕಾ ಜವಾಲ್ಕರ್ ಹೇಳಿದ್ದಾರೆ,(ಏಜೆನ್ಸೀಸ್).