

Virat Kohli: ನಿನ್ನೆ (ಏ.07) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್ಸಿಬಿ 12 ರನ್ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಐಪಿಎಲ್ ಆರಂಭದಿಂದ ಇಂದಿನವರೆಗೆ ರಜತ್ ಪಟಿದಾರ್ ಪಡೆಗೆ ಇದು ಮೂರನೇ ಜಯ ಎಂಬುದು ಗಮನಾರ್ಹ. ರೋಚಕತೆಗೆ ತಿರುಗಿದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾದರು.
42 ಎಸೆತಗಳಲ್ಲಿ 67 ರನ್ ಬಾರಿಸಿದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಕೇವಲ ಸ್ಫೋಟಕ ಬ್ಯಾಟಿಂಗ್ ಮಾತ್ರ ನಡೆಸಿದ್ದಲ್ಲದೇ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದರು. ಇದು ಅಭಿಮಾನಿಗಳ ಸಂತಸಕ್ಕೆ ಕೊನೆಯಿಲ್ಲ ಎನ್ನುವಂತಾಯಿತು. ಕೇವಲ ಟಿ20 ಫಾರ್ಮೆಟ್ನಲ್ಲಿ 386 ಪಂದ್ಯಗಳನ್ನಾಡಿರುವ ವಿರಾಟ್, ಬರೋಬ್ಬರಿ 13,001 ರನ್ ಬಾರಿಸುವ ಮೂಲಕ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದು ಮಾಜಿ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲದೆ ಮುಂಬೈ ತಂಡದ ಬಲಿಷ್ಠ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ವೇಗಕ್ಕೆ ಸಿಕ್ಸರ್ ಬಾರಿಸಿದ ಕೊಹ್ಲಿಯನ್ನು ವಿಶ್ವದ ಶ್ರೇಷ್ಠ ಬ್ಯಾಟರ್ ಎಂದು ಕರೆದಿದ್ದಾರೆ.
"ಬುಮ್ರಾ ಅವರ ಬೌಲಿಂಗ್ನಲ್ಲಿ ಬ್ಯಾಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ ಬುಮ್ರಾ ಓವರ್ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ಕೊಹ್ಲಿ, ತಮ್ಮ ಬಲಿಷ್ಠ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದರು. ಬುಮ್ರಾ ಬೌಲಿಂಗ್ನಲ್ಲಿ ವಿರಾಟ್ ಸಿಕ್ಸರ್ ಬಾರಿಸುತ್ತಾರೆ ಎಂದು ನೀವು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೊಹ್ಲಿ ಹೊಡೆದ ಪರಿ ವೇಗಿಯನ್ನೇ ಅಚ್ಚರಿಗೊಳಿಸಿತು. ತಮ್ಮ ಜತೆಗೆ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ರನ್ನು ಕೂಡ ಅದ್ಭುತವಾಗಿ ಆಡಿಸಿದ ವಿರಾಟ್, ಅಲ್ಲಲ್ಲೇ ಒಂದಷ್ಟು ಕಿವಿಮಾತುಗಳನ್ನು ನೀಡಿದರು. ಮುಂಬೈ ಇಂಡಿಯನ್ಸ್ ಪಾಲಿಗೆ ದುಃಸ್ವಪ್ನದಂತೆ ಕಾಡಿದ ಕೊಹ್ಲಿ, ವೇಗಿಗಳಿಗೆ ಸರಿಯಾಗಿ ಬೆವರಿಳಿಸಿದರು" ಎಂದು ನವಜೋತ್ ಸಿಂಗು ಸಿಧು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).