

ಹೈದರಾಬಾದ್: ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ನ ಐವರು ಭಯೋತ್ಪಾದಕರ ಮರಣದಂಡನೆಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ(ಏಪ್ರಿಲ್ 8) ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಮರಣದಂಡನೆಯನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಈ ಭಯೋತ್ಪಾದಕರು 2013ರ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದಲ್ಲಿ(Hyderabad bomb blast case) ಭಾಗಿಯಾಗಿದ್ದರು, ಆ ಸ್ಫೋಟದಲ್ಲಿ 18 ಜನರು ಮೃತಪಟ್ಟಿದ್ದರು ಮತ್ತು 131 ಜನರು ಗಾಯಗೊಂಡಿದ್ದರು.
ನ್ಯಾಯಮೂರ್ತಿಗಳಾದ ಲಕ್ಷ್ಮಣ್ ಮತ್ತು ಪಿ. ಶ್ರೀ ಸುಧಾ ಅವರಿದ್ದ ಪೀಠವು ಐಎಂ ಭಯೋತ್ಪಾದಕರು ಸಲ್ಲಿಸಿದ್ದ ಕ್ರಿಮಿನಲ್ ಪರಿಷ್ಕರಣಾ ಮೇಲ್ಮನವಿಯನ್ನು ವಜಾಗೊಳಿಸಿ, ಎನ್ಐಎ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ದೃಢಪಡಿಸಲಾಗಿದೆ ಎಂದು ಪೀಠ ಹೇಳಿದೆ.
ಇದಕ್ಕೂ ಮೊದಲು 2016 ಡಿಸೆಂಬರ್ 13ರಂದು ಐಎಂ ಸಹ ಸಂಸ್ಥಾಪಕ ಮೊಹಮ್ಮದ್ ಅಹ್ಮದ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್, ಪಾಕಿಸ್ತಾನಿ ಪ್ರಜೆ ಜಿಯಾ-ಉರ್-ರೆಹಮಾನ್ ಅಲಿಯಾಸ್ ವಕಾಸ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಮೊನ್ಜಾ ಹದ್ದಿ ಸೇರಿದಂತೆ ಐವರು ಸದಸ್ಯರನ್ನು ಎನ್‌ಐಎ ನ್ಯಾಯಾಲಯ ದೋಷಿ ಎಂದು ಘೋಷಿಸಿತ್ತು. ಶೇಖ್ ಫೆಬ್ರವರಿ 21, 2013ರಂದು ನಗರದ ಜನದಟ್ಟಣೆಯ ಶಾಪಿಂಗ್ ಪ್ರದೇಶವಾದ ದಿಲ್‌ಸುಖ್‌ನಗರದಲ್ಲಿ ಎರಡು ಮಾರಕ ಸ್ಫೋಟಗಳು ಸಂಭವಿಸಿದವು. ಆರೋಪಿಗಳಲ್ಲಿ ಒಬ್ಬರ ವಕೀಲರು ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
2013 ಫೆಬ್ರವರಿ 21ರಂದು ನಗರದ ಜನದಟ್ಟಣೆಯ ಶಾಪಿಂಗ್ ಪ್ರದೇಶವಾದ ದಿಲ್‌ಸುಖ್‌ನಗರದಲ್ಲಿ ಎರಡು ಮಾರಕ ಸ್ಫೋಟಗಳು ಸಂಭವಿಸಿದ್ದವು. ಮೊದಲ ಸ್ಫೋಟ ಬಸ್ ನಿಲ್ದಾಣದಲ್ಲಿ ಮತ್ತು ಎರಡನೆಯದು ದಿಲ್‌ಸುಖ್‌ನಗರದ ತಿನಿಸು ಮಳಿಗೆ (ಎ1 ಮಿರ್ಚಿ ಸೆಂಟರ್) ಬಳಿ ಸಂಭವಿಸಿತು.
ಈ ಪ್ರಕರಣವು ಭಯೋತ್ಪಾದಕ ಚಟುವಟಿಕೆಯನ್ನು ಒಳಗೊಂಡಿರುವುದರಿಂದ ಎನ್‌ಐಎ ತನಿಖೆಯನ್ನು ವಹಿಸಿಕೊಂಡಿದೆ ಎಂದು ಪ್ರಾಸಿಕ್ಯೂಷನ್ ವಕೀಲರು ತಿಳಿಸಿದರು. ಆದರೆ ಆರಂಭದಲ್ಲಿ ಇದನ್ನು ನಗರ ಪೊಲೀಸರ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಿತು. ಪ್ರಮುಖ ಆರೋಪಿ ರಿಯಾಜ್ ಭಟ್ಕಳ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.
ಇದನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಬಣ್ಣಿಸಿ, ಐದು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಆಲಿಸಿದ ನಂತರ ಹೈಕೋರ್ಟ್ ಐದು ಐಎಂ ಭಯೋತ್ಪಾದಕರ ಮರಣದಂಡನೆಯನ್ನು ಎತ್ತಿಹಿಡಿಯಿತು. ಎನ್ಐಎ 4,000 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
ಮಂಗಳವಾರ ತನ್ನ ತೀರ್ಪು ನೀಡುವಾಗ ತೆಲಂಗಾಣ ಹೈಕೋರ್ಟ್, NIA ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಈ ಜನರು ಏನು ಮಾಡಿದ್ದಾರೋ ಅದಕ್ಕೆ ಅವರಿಗೆ ಶಿಕ್ಷೆಯಾಗಬೇಕು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಪ್ರಮುಖ ಆರೋಪಿ ರಿಯಾಜ್ ಭಟ್ಕಳ್ ಇನ್ನೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಆತನನ್ನೂ ಆದಷ್ಟು ಬೇಗ ಹಿಡಿದು ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯ ಹೇಳಿದೆ.(ಏಜೆನ್ಸೀಸ್)