

ಮುಂಬೈ: ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಫೈನಲ್ ಗೆದ್ದ ಟೀಮ್ ಇಂಡಿಯಾಗೆ ಅಪಾರ ಮೆಚ್ಚುಗೆ, ಪ್ರಶಂಸೆಗಳ ಮಹಾಪೂರವೇ ಹರಿದುಬಂದಿತು. 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ತಂದುಕೊಟ್ಟ ವೀರರಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅದ್ಧೂರಿ ಗೌರವ ಸಲ್ಲಿಸಿದ ಬಿಸಿಸಿಐ, ಇಡೀ ತಂಡಕ್ಕೆ 125 ಕೋಟಿ ರೂ. ಬಹುಮಾನ ಹಣವನ್ನು ಪ್ರಶಸ್ತಿ ಜತೆ ಹಸ್ತಾಂತರಿಸಿತು.
ಬಿಸಿಸಿಐ ಘೋಷಿಸಿದ 125 ಕೋಟಿ ರೂ. ಬಹುಮಾನದಲ್ಲಿ ತಂಡದ 15 ಮಂದಿಗೆ ತಲಾ 5 ಕೋಟಿ ರೂ. ನೀಡಲಾಗಿದೆ. ಇವರಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಸೇರಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಐದು ಕೋಟಿ ರೂ. ದೊರೆಯಲಿದ್ದು, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರಿಗೆ ತಲಾ 2.5 ಕೋಟಿ ರೂ. ಹಂಚಲಾಗಿದೆ. ಟೀಮ್ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಐವರು ಸದಸ್ಯರು ತಲಾ ಒಂದು ಕೋಟಿ ಪಡೆದಿದ್ದಾರೆ.
ಟಿ20 ವಿಶ್ವಕಪ್ 2024 ಗೆದ್ದ ಟೀಮ್ ಇಂಡಿಯಾಗೆ ಐಸಿಸಿ ಕೊಟ್ಟ ಅಧಿಕ ಮೊತ್ತದ ಬಹುಮಾನ ಹಣವಿದು ಎಂದು ವರದಿಯಾಗಿದೆ. ಈ ಹಿಂದೆ ನೀಡಲಾಗಿದ್ದ ಪ್ರಶಸ್ತಿಗಳಿಗಿಂತ ಇದು 6 ಪಟ್ಟು ಹೆಚ್ಚು ಎನ್ನಲಾಗಿದೆ. ಈ ಮಧ್ಯೆ ತಮಗೆ ಬಂದ ಬಹುಮಾನ ಹಣದಿಂದ ಖುಷಿಪಡದ ಕ್ಯಾಪ್ಟನ್ ರೋಹಿತ್, ತಾವು ವಿಶ್ವಕಪ್ ಗೆಲ್ಲಲು ಮೈದಾನದಲ್ಲಿ ನಿರಂತರವಾಗಿ ಶ್ರಮಿಸಿದ ತಂಡದ ಸಿಬ್ಬಂದಿಗಳಿಗೆ ಬಿಸಿಸಿಐ ಕೊಟ್ಟ ಕಡಿಮೆ ಬೋನಸ್ ಹಣದಿಂದ ತೀವ್ರ ಬೇಸರಕ್ಕೊಳಗಾಗಿದ್ದಾರೆ.
ವರದಿಗಳ ಪ್ರಕಾರ, ಈ ವಿಷಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ರೋಹಿತ್ ಶರ್ಮಾ, ತಮಗೆ ಬಂದಿರುವ ಬಹುಮಾನದಲ್ಲಿ 5 ಕೋಟಿ ರೂ. ಮೊತ್ತವನ್ನು ಇಡೀ ತಂಡದ ಸಿಬ್ಬಂದಿಗಳಿಗೆ ಹಂಚಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ತನಗೆ ನೀಡಲಾದ ಹಣದಲ್ಲಿ ಅವರಿಗಾಗಿ ಕಡಿತಗೊಂಡರೆ ಖಂಡಿತ ನನಗೆ ಯಾವುದೇ ಬೇಸರವಿಲ್ಲ ಎಂದು ತಿಳಿಸಿದ್ದಾರೆ. ಪ್ರತ್ಯೇಕವಾಗಿ ಯಾವ ಸಿಬ್ಬಂದಿಗೆ ಬೋನಸ್ ಹೆಚ್ಚಿಸಲು ರೋಹಿತ್ ಬಯಸಿದ್ದಾರೆ? ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಸ್ವತಃ ಹಿಟ್ಮ್ಯಾನ್ ಕೂಡ ನಿರ್ದಿಷ್ಟವಾಗಿ ಎಲ್ಲಿಯೂ ಉಲ್ಲೇಖಿಸಿಲ್ಲ,(ಏಜೆನ್ಸೀಸ್).