

ಚೆನ್ನೈ: ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ 2019ರಲ್ಲಿ ತೆರೆಕಂಡ ಕೈದಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕೇವಲ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಲೋಕೇಶ್ ತುಂಬಾ ಅದ್ಭುತವಾಗಿ ಹೇಳಿದ್ದಾರೆ. ಇಡೀ ಕತೆಯ ಕೇಂದ್ರ ಬಿಂದು ಯಾರೆಂದರೆ ನಟ ಕಾರ್ತಿ. ಕೈದಿಯಾಗಿ ಕಾರ್ತಿ ಅಭಿನಯ ಮನಮೋಹಕವಾಗಿದೆ.
ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸುವ ಪೊಲೀಸರು ದಂದೆಕೋರರ ಬಳಿ ಸಿಲುಕಿದಾಗ ಅವರನ್ನು ರಕ್ಷಣೆ ಮಾಡುವ ಕೈದಿ ಪಾತ್ರದಲ್ಲಿ ಕಾರ್ತಿ ನಟಿಸಿದ್ದಾರೆ. ಇಡೀ ಕತೆ ಒಂದೇ ರಾತ್ರಿಯಲ್ಲಿ ನಡೆಯುತ್ತದೆ. ಆದರೆ, ಎಲ್ಲಿಯೂ ಸಿನಿಮಾ ಬೋರ್ ಆಗುವುದಿಲ್ಲ ಮತ್ತು ಇಡೀ ಸಿನಿಮಾ ತುಂಬಾ ರೋಚಕತೆಯಿಂದ ಸಾಗುತ್ತದೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಕೈದಿ 2 ಸಿನಿಮಾ ಬಗ್ಗೆ ನಿರ್ದೇಶಕ ಲೋಕೇಶ್ ಸುಳಿವು ನೀಡಿದ್ದು, ಎರಡನೇ ಭಾಗ ಯಾವಾಗ ಬರುತ್ತದೆ ಎಂದು ಸಿನಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
2019ರಲ್ಲಿ ಮೊದಲ ಭಾಗ ಬಿಡುಗಡೆಯಾಗಿ ನಾಲ್ಕು ವರ್ಷ ಸಮೀಪಿಸುತ್ತಿದ್ದರೂ ಎರಡನೇ ಭಾಗ ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಲೋಕೇಶ್ ಮತ್ತು ಕಾರ್ತಿ ಎಲ್ಲಿಯೇ ಹೋದರು ಕೈದಿ 2 ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದರು. ಇದೀಗ ಆ ಪ್ರಶ್ನೆಗೆ ಕೊನೆಗೂ ನಟ ಕಾರ್ತಿ ಉತ್ತರ ನೀಡಿದ್ದಾರೆ.
ಈ ವರ್ಷದಲ್ಲಿ ಕಾರ್ತಿ ಅಭಿನಯದ ಮೀಯಳಗನ್ ಮತ್ತು ವಾ ವಾಥಿಯಾರ್ ಎಂಬ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಅಲ್ಲದೆ, ಪಿಎಸ್ ಮಿತ್ರನ್ ನಿರ್ದೇಶನದ ಸರ್ದಾರ್ 2 ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಲಿದೆ. ತಮ್ಮ ಅಭಿಮಾನಿಗಳ ಸಂಘ, ಆಲ್ ಇಂಡಿಯಾ ಕಾರ್ತಿ ಮಕ್ಕಳ್ ನಳ ಮಂದ್ರಂ ಪರವಾಗಿ ರೋಗಿಗಳಿಗೆ ರಕ್ತದಾನ ಮಾಡಿದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ತಿ, ಕೈದಿ 2 ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರ್ದಾರ್ 2 ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ರೆಡಿಯಾಗಿದ್ದೇನೆ. ಕೈದಿ 2 ಸಿನಿಮಾದಲ್ಲಿ ಲೋಕೇಶ್ ಜೊತೆಗೂಡಿ ಬಿರಿಯಾನಿ ಬಕೆಟ್ ಹಿಡಿದುಕೊಂಡು ಮತ್ತೆ ಕಾಣಿಸಿಕೊಳ್ಳುತ್ತೇನೆ ಎಂದು ಇದೇ ವೇಳೆ ನಗುತ್ತಾ ಹೇಳಿದರು. ಅಂದರೆ, ಮುಂದಿನ ವರ್ಷ ಕೈದಿ 2 ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂಬ ಸುಳಿವನ್ನು ಕಾರ್ತಿ ಅವರು ನೀಡಿದ್ದಾರೆ. ಈ ಸಿನಿಮಾ ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.
ಇನ್ನು ಬಿಡುಗಡೆಗೆ ಸಿದ್ಧವಾಗಿರುವ ವಾ ವಾಥಿಯಾರ್ ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿದ್ದಾರೆ. ಸತ್ಯರಾಜ್ ಮತ್ತು ರಾಜ್ಕಿರಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾರ್ತಿ ಕೊನೆಯದಾಗಿ ರಾಜು ಮುರುಗನ್ ನಿರ್ದೇಶನದ ಜಪಾನ್ ಚಿತ್ರದಲ್ಲಿ ಕಾಣಿಸಿಕೊಂಡರು. (ಏಜೆನ್ಸೀಸ್)