ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಅಂತ PCB ಬೇಡಿಕೊಳ್ಳುತ್ತಿರುವುದೇಕೆ? ಇಲ್ಲಿದೆ ಅಚ್ಚರಿಯ ಸಂಗತಿ

Team India
Published on

ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಭಾರಿ ಖುಷಿಯಲ್ಲಿರುವ ಟೀಮ್​ ಇಂಡಿಯಾಗೆ ಚಾಂಪಿಯನ್ಸ್ ಟ್ರೋಫಿ ಮುಂದಿನ ಗುರಿಯಾಗಿದೆ. ಈ ಪ್ರತಿಷ್ಠಿತ ಐಸಿಸಿ ಟೂರ್ನಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯಲಿದೆ. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಮತ್ತೆ ಟ್ರೋಫಿಗೆ ಮುತ್ತಿಕ್ಕಲಿಲ್ಲ. ಟಿ20 ವಿಶ್ವಕಪ್ ಗೆದ್ದ ಹುಮ್ಮಸ್ಸಿನಲ್ಲಿರುವ ನಾಯಕ ರೋಹಿತ್ ಶರ್ಮ, ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ತವರಿಗೆ ತರುವ ಸಂಕಲ್ಪ ತೊಟ್ಟಿದ್ದಾರೆ. ಅದಕ್ಕಾಗಿ ಅವರು ಈಗಾಗಲೇ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದರ ನಡುವೆಯೇ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನಕ್ಕೆ ಬಿಸಿಸಿಐ ಶಾಕ್​ ನೀಡುವ ಸೂಚನೆಗಳಿವೆ.

ಹಲವು ವರ್ಷಗಳಿಂದ ಟೀಮ್​ ಇಂಡಿಯಾ ಪಾಕಿಸ್ತಾನ ಪ್ರವಾಸ ಮಾಡಿಲ್ಲ ಎಂಬುದು ಗೊತ್ತೇ ಇದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ಸಾಂಪ್ರದಾಯಿಕ ಎದುರಾಳಿಗಳೆಂದೇ ಉಭಯ ದೇಶಗಳು ಗುರುತಿಸಿಕೊಂಡಿವೆ. ನಿರಂತರ ಘರ್ಷಣೆಯಿಂದಾಗಿ ಪಾಕಿಸ್ತಾನದಲ್ಲಿ ಭಾರತ ತಂಡದ ಭದ್ರತೆಯ ಬಗ್ಗೆ ಕಾಳಜಿ ವಹಿಸಿರುವ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿದೆ.

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ಬಹಳ ದಿನಗಳಾಗಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಈ ಎರಡು ದೇಶಗಳ ನಡುವಿನ ಕ್ರಿಕೆಟ್ ಪಂದ್ಯವು ಮಿನಿ ಯುದ್ಧದಂತಿರುತ್ತದೆ. ಭಾರತ-ಪಾಕ್ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ತಮ್ಮ ಟಿವಿಗಳಿಗೆ ಅಂಟಿಕೊಳ್ಳುವ ಪಂದ್ಯವೆಂದರೆ ಅದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ.

ಆದರೆ, ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್​ ಇಂಡಿಯಾ ತಮ್ಮ ದೇಶಕ್ಕೆ ಬರಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಆ ದೇಶದ ಕ್ರಿಕೆಟ್ ಅಭಿಮಾನಿಗಳು ಬಲವಾಗಿ ಬಯಸಿದ್ದಾರೆ. ಆದರೆ, ಟೀಮ್​ ಇಂಡಿಯಾವನ್ನು ಅಲ್ಲಿಗೆ ಕಳುಹಿಸಲು ಬಿಸಿಸಿಐ ಇನ್ನೂ ಸಿದ್ಧವಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಾಗಲೇ ಚಾಂಪಿಯನ್ಸ್ ಟ್ರೋಫಿ ಕರಡು ವೇಳಾಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದೆ. 2025 ಮಾರ್ಚ್ 1 ರಂದು ಲಾಹೋರ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಭದ್ರತಾ ಕಾರಣಗಳಿಗಾಗಿ ಟೀಮ್ ಇಂಡಿಯಾ ಆಡುವ ಎಲ್ಲ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸಲಾಗುವುದು ಎಂದು ಹೇಳಿದೆ. ಆದರೆ, ಬಿಸಿಸಿಐ ಅದಕ್ಕೆ ಒಪ್ಪುತ್ತಿಲ್ಲ. ಟೀಮ್​ ಇಂಡಿಯಾ ಆಡುವ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಬಿಸಿಸಿಐ ಈಗಾಗಲೇ ಐಸಿಸಿಗೆ ಮನವಿ ಮಾಡಿದೆ.

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದೆ. ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದೆ. ಬಹುತೇಕ ಟೀಮ್​ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net