ಆ ಸಿನಿಮಾದಲ್ಲಿ ನಟಿಸಿದ ಬಳಿಕ ನನ್ನ ವೃತ್ತಿ ಜೀವನವೇ ಹಾಳಾಯ್ತು: ನಟಿ ರಾಶಿ ಸ್ಫೋಟಕ ಹೇಳಿಕೆ

Actress Raasi
Published on

ಚೆನ್ನೈ: ನಟಿ ರಾಶಿ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ಸ್ನೇಹಾ, ವಿಷ್ಣುವರ್ಧನ್​ ಅಭಿನಯದ ಜಮಿನ್ದಾರ್ರು ಹಾಗೂ ರಾಜನರಸಿಂಹ ಮತ್ತು ಶಿವರಾಜ್​ಕುಮಾರ್ ನಟನೆಯ ನಿನ್ನೇ ಪ್ರೀತಿಸುವೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು.

ರಾಶಿ ಅವರು ಕನ್ನಡಕ್ಕಿಂತ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ಇರುವಾಗಲೇ ರಾಶಿ ಅವರು ಸಹಾಯಕ ನಿರ್ದೇಶಕ ಶ್ರೀ ಮುನಿ ಎಂಬುವರನ್ನು ಪ್ರೀತಿಸಿ, 2005ರಲ್ಲಿ ಮದುವೆಯಾದರು. ದಂಪತಿಗೆ ರಿತಿಮಾ ಹೆಸರಿನ ಮಗಳಿದ್ದಾಳೆ.

ರಾಶಿ ಅವರು ಕನ್ನಡದಲ್ಲಿ ನಟಿಸಿದ್ದು, ನಾಲ್ಕೇ ಸಿನಿಮಾಗಳಾದರೂ ಆ ಸಿನಿಮಾಗಳು ಸಿಕ್ಕಾಪಟ್ಟೆ ಹಿಟ್​ ಆಗಿದ್ದರಿಂದ ರಾಶಿ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ. ಅದರಲ್ಲೂ ಜಮಿನ್ದಾರ್ರು ಸಿನಿಮಾದ “ಹುಡುಗಿ ಹುಡುಗಿ ಮಲೆನಾಡ ಹುಡುಗಿ” ಹಾಡು ಇಂದಿಗೂ ಅನೇಕರು ಫೇವರಿಟ್​ ಆಗಿದೆ. ಸಿನಿಮಾಗಳಲ್ಲಿ ತುಂಬಾ ಬಿಜಿಯಾಗಿದ್ದ ರಾಶಿ ಮದುವೆಯ ಬಳಿಕ ಸಿನಿಮಾದಿಂದ ದೂರ ಉಳಿದಿದ್ದು, ವೈವಾಹಿಕ ಜೀವನದ ಕಡೆ ಸಂಪೂರ್ಣ ಗಮನ ಹರಿಸಿದ್ದಾರೆ. ಇದೀಗ ಮತ್ತೆ ನಟನೆಯತ್ತ ಮುಖ ಮಾಡಿದ್ದು, ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸಂಗತಿ ಏನೆಂದರೆ, ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗವಹಿಸಿದ ರಾಶಿ, ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ಸ್ಫೋಟಕ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ತಮಿಳಿಗಿಂತಲೂ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. 2003ರಲ್ಲಿ ಮಹೇಶ್ ಬಾಬು ಮತ್ತು ರವಿತೇಜ ಅಭಿನಯದ ನಿಜಂ ಚಿತ್ರದಲ್ಲಿ ನಟಿಸಿದ್ದೆ. ಆ ಸಿನಿಮಾ ನನ್ನ ಇಮೇಜ್ ಮತ್ತು ನನ್ನ ವೃತ್ತಿ ಜೀವನವನ್ನೇ ಹಾಳು ಮಾಡಿತು ಎಂದಿದ್ದಾರೆ.

ನಿಜಂ ಚಿತ್ರದ ನಿರ್ದೇಶಕರು ನನಗೆ ಚಿತ್ರದ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳಿದರು. ಆದರೆ, ಚಿತ್ರದ ಚಿತ್ರೀಕರಣದ ವೇಳೆ ಅವರು ಬೇರೆ ವಿಧಾನವನ್ನು ಅನುಸರಿಸಿದರು. ನಾನು ಅದನ್ನು ಪ್ರಶ್ನೆ ಮಾಡಿದೆ. ಆದರೆ, ಮುಂಗಡವಾಗಿ ಹಣ ಪಡೆದಿದ್ದರಿಂದ ಬೇರೆ ದಾರಿಯಿಲ್ಲದೆ ಆ ಸಿನಿಮಾದಲ್ಲಿ ನಟಿಸಿದೆ. ಆ ಸಿನಿಮಾ ಬಳಿಕ ವೃತ್ತಿ ಜೀವನವೇ ಮುಗಿದೇ ಹೋಯಿತು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net