ನಾನು ಸ್ವಲ್ಪ ಸಮಯದವರೆಗೆ… ಅಭಿಮಾನಿಗಳ ಮುಂದೆ ಅಚ್ಚರಿ ಹೇಳಿಕೆ ನೀಡಿದ ರೋಹಿತ್​ ಶರ್ಮ!

Rohit Sharma
Published on

ನವದೆಹಲಿ: ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ, ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತವನ್ನು ಚಾಂಪಿಯನ್ನಾಗಿ ಮಾಡಿದ ರೋಹಿತ್, ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಹೆಮ್ಮೆಪಡುವಂತೆ ಮಾಡಿದರು. ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತ ತಂಡ ವಿಶ್ವಕಪ್ ಗೆದ್ದಿದ್ದನ್ನು ಕಂಡು ಕ್ರಿಕೆಟ್ ಅಭಿಮಾನಿಗಳಿಗೆ ಎಷ್ಟು ಖುಷಿಪಟ್ಟಿದ್ದಾರೋ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿರುವುದು ಅಷ್ಟೇ ಬೇಸರವನ್ನೂ ತರಿಸಿದೆ.

ಇದೀಗ ರೋಹಿತ್ ಶರ್ಮ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರೋಹಿತ್, ನಾನು ಇನ್ನು ಸ್ವಲ್ಪ ಸಮಯದವರೆಗೆ ಆಡುವುದನ್ನು ನೀವು ನೋಡುತ್ತೀರಿ ಎನ್ನುವ ಮೂಲಕ ಸದ್ಯಕ್ಕೆ ಏಕದಿನ ಮತ್ತು ಟೆಸ್ಟ್​ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡುವುದಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ನೂ ವಯಸ್ಸಿನ ಕಾರಣದಿಂದಾಗಿ ರೋಹಿತ್ ಶರ್ಮ ಹೆಚ್ಚು ದಿನ ಕ್ರಿಕೆಟ್​ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹಲವು ಕ್ರಿಕೆಟ್ ತಜ್ಞರು ಭಾವಿಸಿದ್ದರು. ರೋಹಿತ್​ ನಿವೃತ್ತಿಯ ಬಗ್ಗೆಯೂ ವಿವಿಧ ವರದಿಗಳು ಈಗಾಗಲೇ ಬಂದಿವೆ. ಆದರೆ, ಟಿ20 ವಿಶ್ವಕಪ್ ಗೆದ್ದು ಒಂದು ಫಾರ್ಮ್ಯಾಟ್‌ನಿಂದ ನಿವೃತ್ತಿ ಘೋಷಿಸಿದ ನಂತರ ರೋಹಿತ್‌ಗೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ದೀರ್ಘಕಾಲ ಆಡುವ ಅವಕಾಶ ಸಿಕ್ಕಿದೆ.

ರೋಹಿತ್ ಶರ್ಮ ಜೊತೆಗೆ ವಿರಾಟ್ ಕೊಹ್ಲಿಯು ಕೂಡ ದೀರ್ಘ ಕಾಲ ಕ್ರಿಕೆಟ್ ಆಡುವ ಸೂಚನೆಗಳಿವೆ. 2027ರ ಏಕದಿನ ವಿಶ್ವಕಪ್​ವರೆಗೆ ಇಬ್ಬರೂ ಜೊತೆಯಾಗಿ ಆಡುತ್ತಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ. ಅಲ್ಲದೆ, ರೋಹಿತ್ ಶರ್ಮ 2027ರ ಏಕದಿನ ವಿಶ್ವಕಪ್ ಅನ್ನು ಗುರಿಯಾಗಿಸಿಕೊಂಡಿರುವಂತೆ ತೋರುತ್ತಿದೆ. ಅದಕ್ಕೇ ಈಗ ರಿಟೈರ್ ಆಗಲ್ಲ, ಇನ್ನು ಹೆಚ್ಚು ಹೊತ್ತು ಕ್ರಿಕೆಟ್ ಆಡೋದನ್ನ ನೀವೆಲ್ಲ ನೋಡುತ್ತೀರಿ ಎಂದಿದ್ದಾರೆ. ರೋಹಿತ್ ಶರ್ಮರ ವೃತ್ತಿಜೀವನದ ಸ್ಪಷ್ಟತೆಯ ಬಗ್ಗೆ ತಿಳಿದು ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net