ಬೇರೆ ನಟರ ಸಿನಿಮಾ ನೋಡಲ್ಲ ಎಂದ ದಚ್ಚು ಅಭಿಮಾನಿಗಳಿಗೆ ಖಡಕ್​ ತಿರುಗೇಟು ಕೊಟ್ಟ ಉಮಾಪತಿ ಗೌಡ!

Umapathya Gowda
Published on

ಬೆಂಗಳೂರು: ನಟ ದರ್ಶನ್​, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯಕ್ಕೆ ದರ್ಶನ್​ ಬಿಡುಗಡೆ ಅನುಮಾನ. ಹೀಗಾಗಿ ಅವರ ಮುಂದಿನ ಸಿನಿಮಾಗಳ ಸ್ಥಿತಿ ಅಧೋಗತಿಯಾಗಿದೆ. ಬಂಡವಾಳ ಹೂಡಿದವರು ಚಿಂತೆಗೆ ಜಾರಿದ್ದಾರೆ.

ಇನ್ನೂ ಅಭಿಮಾನಿಗಳು ಕೂಡ ನೆಚ್ಚಿನ ನಟನ ಬಿಡುಗಡೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ನಿತ್ಯವು ತಮ್ಮ ನಟನ ಜಪ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂಬ ಭರವಸೆಯಲ್ಲಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಹೀರೋ ನಟಿಸಿದ ಚಿತ್ರಗಳು ಬಿಡುಗಡೆ ಆಗುವವರೆಗೂ ಬೇರೆ ನಟರ ಸಿನಿಮಾಗಳನ್ನು ನೋಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಮನವಿ ಸಹ ಮಾಡುತ್ತಿದ್ದಾರೆ. ಆದರೆ, ಇಂತಹ ಅಭಿಮಾನಿಗಳಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಖಡಕ್​ ತಿರುಗೇಟು ನೀಡಿದ್ದಾರೆ.

ಚಿತ್ರರಂಗದಲ್ಲಿ ಏಳು-ಬೀಳು ಸಹಜವಾಗಿದೆ. ಇಡೀ ಚಿತ್ರರಂಗ ಯಾರೋ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಹಲವು ತಲೆಮಾರುಗಳು ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ್ದಾರೆ. ತಲೆತಲಾಂತರದಿಂದ ಸಾಕಷ್ಟು ಮಂದಿ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಒಳ್ಳೆಯ ಚಿತ್ರಗಳ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳು ನಿಮ್ಮ ಕಣ್ಣ ಮುಂದೆಯೇ ಇದೆ ಎಂದು ಉಮಾಪತಿ ಗೌಡ ಹೇಳಿದರು.

ಇನ್ನು ಎಲ್ಲ ವಿಷಯದಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದಿದೆ. ಅದೇ ರೀತಿ ಒಳ್ಳೆಯ ಘಳಿಗೆ ಮತ್ತು ಕೆಟ್ಟ ಘಳಿಗೆ ಎಂಬುದಿದೆ. ಸ್ಟಾರ್​ ನಟರ ಸಿನಿಮಾಗಳು ಇಲ್ಲದಿರುವುದು ಇಂದು ಚಿತ್ರರಂಗಕ್ಕೆ ಹಿನ್ನಡೆಯಾಗಿರಬಹುದು. ಆದರೆ, ಮುಂದೆ ಒಳ್ಳೆಯ ದಿನಗಳು ಬರುವ ಲಕ್ಷಣಗಳು ಕಾಣುತ್ತಿವೆ. ಚುನಾವಣೆ, ಐಪಿಎಲ್‌ ಹಾಗೂ ಟಿ20 ವಿಶ್ವಕಪ್​ ಟೂರ್ನಿ ಇದ್ದ ಕಾರಣ ಜನ ಸಿನಿಮಾ ನೋಡಲು ಆಸಕ್ತಿ ತೋರಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರು ಚಿತ್ರಮಂದಿರಕ್ಕೆ ಮತ್ತೆ ಬರುತ್ತಾರೆ. ಅದನ್ನು ಬಿಟ್ಟು ಯಾರೋ ಅವರ ಸಿನಿಮಾ ನೋಡಬೇಡಿ, ಇವರ ಸಿನಿಮಾ ನೋಡಬೇಡಿ ಅಂದರೆ ಅದೆಲ್ಲ ಇಲ್ಲಿ ನಡೆಯುವುದಿಲ್ಲ. ಅಪ್ಪಟ್ಟ ಸಿನಿ ಅಭಿಮಾನಿಗಳು ನಮ್ಮ ನಡುವೆ ಇದ್ದಾರೆ ಎಂದು ದರ್ಶನ್​ ಅಭಿಮಾನಿಗಳಿಗೆ ಉಮಾಪತಿ ಶ್ರೀನಿವಾಸ್​ ಗೌಡ್​ ಖಡಕ್​ ತಿರುಗೇಟು ನೀಡಿದರು.

ಏನಿದು ಪ್ರಕರಣ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net